Site icon Suddi Belthangady

ಹೆದ್ದಾರಿ ಕಾಮಗಾರಿ ಅವಾಂತರ- ಮುಂಡಾಜೆಯ ಚಂದ್ರಶೇಖರ ಅಂಬಡ್ತ್ಯಾರು ರವರ ಮನೆ ಅಪಾಯದಲ್ಲಿ

ಬೆಳ್ತಂಗಡಿ: ಪುಂಜಾಲಕಟ್ಟೆ- ಚಾರ್ಮಾಡಿವರೆಗಿನ ಹೈವೇ ಕಾಮಗಾರಿಯಲ್ಲಿ ಗುತ್ತಿಗೆದಾರರ ಅಸಮರ್ಪಕ ಹಾಗೂ ಬೇಜವಾಬ್ಧಾರಿ ನಿರ್ವಹಣೆಯಿಂದಾಗಿ ಈಗಾಗಲೇ ಹಲವು ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿರುವ ಮಧ್ಯೆಯೇ ಇದೀಗ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಎಂಬಲ್ಲಿ ಚಂದ್ರಶೇಖರ ಅವರ ಮನೆಗೆ ಮಳೆ ನೀರು ಪ್ರವಾಹದ ರೀತಿಯಲ್ಲಿ ನುಗ್ಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.

ಜು.29ರಂದು ರಾತ್ರಿ ಮತ್ತು ಜು.30ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟ ಚರಂಡಿ ಹಾಗೂ ಕೆಲವೆಡೆ ಅರ್ಧ ಮಾಡಿಟ್ಟ ಚರಂಡಿ ಕಾಮಗಾರಿಯ ಪರಿಣಾಮ ತಗ್ಗು ಪ್ರದೇಶದಲ್ಲಿರುವ ಚಂದ್ರಶೇಖರ ಅವರ ಮನೆಗೆ ನೀರು ನುಗ್ಗಿದೆ. ಈ ಹೈವೇ ಕಾಮಗಾರಿಯ ಅವಾಂತರದಿಂದಾಗಿ
ಪತ್ನಿ ಮಕ್ಕಳ ಜೊತೆ ಮನೆಯಲ್ಲಿ ನೆಲೆಸಿರುವ ಚಂದ್ರಶೇಖರ ಅವರು ಇದೀಗ ಕಾಳಜಿ ಕೇಂದ್ರ ಸೇರಬೇಕಾದ ಸ್ಥಿತಿ ತಂದಿಡಲಾಗಿದೆ.

ಇವರ ಮನೆಯು ಕೆಳಭಾಗದಲ್ಲಿದ್ದು, ಮೇಲಿನ ರಸ್ತೆಯಲ್ಲಿ ಇದ್ದ ಮೋರಿಯನ್ನು 10 ತಿಂಗಳ ಹಿಂದೆ ಕೆಡವಿರುವ ಗುತ್ತಿಗೆದಾರರು, ಅರ್ಧ ಮೋರಿ ಕಾಮಗಾರಿ ನಿರ್ವಹಿಸಿ ಉಳಿದ ಭಾಗವನ್ನು ಮಣ್ಣು ಮುಚ್ಚಿ ಹಾಗೆಯೇ ಬಿಟ್ಟು ಹೋಗಿದ್ದಾರೆ.ಮೇಲ್ಬಾಗದ ಅರಣ್ಯ ಮತ್ತು ಖಾಸಗಿ ಜಾಗದಿಂದ ಭಾರೀ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರಿಗೆ ಸರಾಗವಾಗಿ ಹರಿದು ಹೋಗಲು ಸ್ಥಳಾವಕಾಶವಿಲ್ಲದೆ ಪೂರ್ತಿ ನೀರು ಅವರ ಮನೆಯ ಅಂಗಳದ ಕಡೆಗೆ ಹರಿದುಬರುತ್ತಿದೆ. ಅವರ ಮನೆಯ ಪಕ್ಕದಲ್ಲೇ ಇರುವ ಶೆಡ್ಡ್ ನೊಳಗೆ ನುಗ್ಗಿರುವ ನೀರು ಹಾಗೆಯೇ ಮುಂದಕ್ಕೆ ಅವರ ವಾಸದ ಮನೆಯ ಅಂಗಳಕ್ಕೆ ಹರಿಯುತ್ತಿದೆ.

ಮನೆಯೊಳಗೆ ಕೂಡ ನೀರು ಪ್ರವೇಶಿಸಿದ್ದು, ಮನೆಯ ಸೊತ್ತುಗಳಿಗೆ ಹಾನಿಯಾಗಿದೆ.ರಾತ್ರಿ ಇಲ್ಲಿ ತಂಗುವುದಕ್ಕೂ ಮನೆ ಮಂದಿ ಭಯಪಡುವ ಸನ್ನಿವೇಶ ಏರ್ಪಟ್ಟಿದೆ.ಅಲ್ಲದೆ ಮುಖ್ಯ ರಸ್ತೆಯಿಂದ ಇವರ ಮನೆಗೆ ಇಳಿಯಲು ಇವರೇ ಸ್ವತಃ ರಚಿಸಿಕೊಂಡಿರುವ ರಸ್ತೆಯ ಮೇಲೆ ನೀರು ಹರಿದು ಸಂಪರ್ಕ ರಸ್ತೆಯೂ ಹಾನಿಗೊಳಗಾಗಿದೆ.

ಆದ್ದರಿಂದ ಹೆದ್ದಾರಿ ಇಲಾಖೆ, ಸಂಬಂಧಿಸಿದ ಗುತ್ತಿಗೆದಾರರು, ತಾಲೂಕು ಆಡಳಿತ, ವಿಪತ್ತು ನಿರ್ವಹಣಾ ಘಟಕ ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

Exit mobile version