ಬೆಳ್ತಂಗಡಿ: ಎಲ್ಲ ವೃತ್ತಿಗಿಂತ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ಮುಖ್ಯ ಶಿಕ್ಷಕರು ಭವಿಷ್ಯದ ಪ್ರಜೆಗಳ ರೂಪಿಸುವುದರ ಜೊತೆಗೆ ಸಮಗ್ರ ಶಾಲಾಭಿವೃದ್ಧಿಯ ಹೊಣೆಗಾರಿಕೆಯುಳ್ಳವರೂ ಆಗಿರುತ್ತಾರೆ. ಮಕ್ಕಳಿಗೆ ಹೊಸ ವಿಚಾರಗಳನ್ನು ಕಲಿಸುವುದರ ಜೂತೆಗೆ ಸಮಕಾಲೀನ ಸವಾಲುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತುಂಬಬೇಕಾಗದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅಭಿಪ್ರಾಯಪಟ್ಟರು. ಅವರು ಬೆಳ್ತಂಗಡಿ ಶ್ರೀಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿದ ಬೆಳ್ತಂಗಡಿ ತಾಲೂಕಿನ ಮುಖ್ಯ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ, ಸನ್ಮಾನ ಮತ್ತು ಗೌರವಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮತ್ತು 100 ಶೇಕಡ ಫಲಿತಾಂಶ ಸಾಧಿಸಿದ ಶಾಲೆಗಳನ್ನು ಗೌರವಿಸಲಾಯಿತು. ಜೊತೆಗೆ ನಿವೃತ್ತಿ ಹೊಂದಿದ ಮೂವರು ಮುಖ್ಯ ಶಿಕ್ಷಕರುಗಳಾದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ನ ಮೋಹನ್ ನಾಯಕ್, ಧನ್ಯಕುಮಾರ್ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ ಧರ್ಮಸ್ಥಳ ಮತ್ತು ಪದ್ಮರಾಜ್ ಧರ್ಮಸ್ಥಳ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಪದ್ಮರಾಜ್ ರವರು ಅನಿಸಿಕೆ ವ್ಯಕ್ತಪಡಿಸಿದರು. ಕೊರಗಪ್ಪ ಹಳೆಪೇಟೆ ಪ್ರೌಢಶಾಲೆ, ಪೂರ್ಣಿಮ ಕಲ್ಮಂಜ ಪ್ರೌಢಶಾಲೆ, ಪದ್ಮಲತಾ ಗುರುವಾಯನಕೆರೆ ಪ್ರೌಢಶಾಲೆ, ರಾಧಾಕೃಷ್ಣ ಕೊಯ್ಯೂರು ಪ್ರೌಢಶಾಲೆ, ಬಾಲಕೃಷ್ಣ ಪೆರ್ಲ ಬೈಪಾಡಿ ಪ್ರೌಢಶಾಲೆ ಇವರು ವಿವಿಧ ಕಾರ್ಯಕಲಾಪಗಳನ್ನು ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ದ.ಕ ಜಿಲ್ಲಾಧ್ಯಕ್ಷ ಮಹಮ್ಮದ್ ರಿಯಾಜ್ ಶುಭಕೋರಿದರು. ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೊಯ್ಯೂರು, ಶಿಕ್ಷಕಿ ಜೆಸಿಂತರವರು ಉಪಸ್ಥಿತರಿದ್ದರು.
ಸಂಘದ ಕೋಶಾಧ್ಯಕ್ಷ ಪ್ರಶಾಂತ ಸವಣಾಲುರವರು ಸ್ವಾಗತಿಸಿ, ಕೊಕ್ರಾಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಚ್. ಎಸ್.ಶ್ರೀಕೃಷ್ಣ ವಂದಿಸಿದರು, ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.