Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲೈ 27ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ ಯವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಲು, ಅಂಕ ಗಳಿಸಲು ಸರಳ ವಿಧಾನವನ್ನು ತಿಳಿಸಿದರು.ಹಾಗೆಯೇ ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರದೆ ಕಲಿಕೆಗೆ ಪ್ರೋತ್ಸಾಹಿಸಬೇಕು. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ನೈತಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಳಿಸಬೇಕೆಂದು ಕಿವಿಮಾತು ನೀಡಿದರು.

ಶಾಲಾ ಸಂಚಾಲಕ ಅತೀ ವಂ.ಫಾ.ವಾಲ್ಟರ್ ಡಿಮೆಲ್ಲೋ ರವರು ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಬೇಕೆಂದು ನುಡಿದು ಶುಭ ಹಾರೈಸಿದರು. ಸತತ 9ನೇ ಬಾರಿ ನೂರು ಶೇಕಡಾ ಫಲಿತಾಂಶವನ್ನು ಪಡೆಯಲು ಶ್ರಮವಹಿಸಿದ ಶಿಕ್ಷಕ ವೃಂದದವರನ್ನು ಅಭಿನಂದಿಸಲಾಯಿತು.

ಶಾಲೆಗೆ ನೂತನವಾಗಿ ನೇಮಕಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ರನ್ನು ಸ್ವಾಗತಿಸಲಾಯಿತು. ಪೋಷಕರು ಶಾಲೆಯ ಕುರಿತು ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಂಡರು. ಸಹ ಶಿಕ್ಷಕಿಯರಾದ ಲೋನ ಲೋಬೋ ಸಂಪನ್ಮೂಲ ವ್ಯಕ್ತಿಯವರನ್ನು ಪರಿಚಯಿಸಿದರು. ಪಲ್ಲವಿ ಸ್ವಾಗತಿಸಿದರು. ಸರಿತಾ ರೊಡ್ರಿಗಸ್ ವಂದಿಸಿದರು. ಬ್ಲೆಂಡಿನ್ ರೊಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version