ಬೆಳ್ತಂಗಡಿ: ರಾಷ್ಟ್ರ ಅಭಿಮಾನವನ್ನು ಹೊಂದಿ ದೇಶವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದು ಭಾರತೀಯ ಭೂಸೇನೆಯ ಮಾಜಿ ಸೈನಿಕರಾದ ವಿಕ್ಟರ್ ಕ್ರಾಸ್ತ ಹೇಳಿದರು.
ಅವರು ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ 25ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸಂಸ್ಮರಣೆಯ ಮಾತುಗಳನ್ನಾಡುತ್ತಾ, ದೇಶದಲ್ಲಿರುವ ಪ್ರತಿಯೊಬ್ಬರು ಸೈನಿಕ ತರಬೇತಿಯನ್ನು ಪಡೆದು ದೇಶ ಸೇವೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವಂತಾಗಬೇಕು. ಕಾರ್ಗಿಲ್ ನಂತಹ ಪ್ರದೇಶದಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸಿ ಬಂದರೆ ಅವನು ಪುನರ್ಜನ್ಮ ಪಡೆದಂತೆ ಎಂದರು.
ಎನ್ಎಸ್ಎಸ್ ನ ದೈನಂದಿನ ಚಟುವಟಿಕೆಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಎಸ್ಎಫ್ ನ ಮಾಜಿ ಸೈನಿಕರಾದ ಲಕ್ಷ್ಮಣ ಜಿ.ಡಿ ಅವರು ಕಾರ್ಗಿಲ್ ಯುದ್ಧದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ, ವಿದ್ಯಾರ್ಥಿಗಳು ಉತ್ತಮ ವಿದ್ಯಾರ್ಹತೆಯನ್ನು ಪಡೆದು ಅವಕಾಶ ಸಿಕ್ಕಿದರೆ ಗೌರವಯುತ ಸೈನಿಕರಾಗಿ ಕರ್ತವ್ಯ ನಿರ್ವಹಿಸಬಹುದು. ದೇಶ ಸೇವೆ ಮಾಡುವುದರೊಂದಿಗೆ ಉತ್ತಮ ಜೀವನ ನಿರ್ವಹಣೆಯು ಇದರಿಂದ ಸಾಧ್ಯವಾಗುವುದು ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ, ಎನ್ ಎಸ್ ಎಸ್ ಸಹ ಕಾರ್ಯಕ್ರಮ ಅಧಿಕಾರಿ ದೀಕ್ಷಾ ಉಪಸಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಶಂಕರ್ ರಾವ್ .ಬಿ ವಂದಿಸಿದರು. ಕುಮಾರಿ ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.