ಬೆಳ್ತಂಗಡಿ: ವೇಣೂರು ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಬಿಜೆಪಿ ನಡೆಸಿದ ಆಂತರಿಕ ಚುನಾವಣೆಯ ಫಲಿತಾಂಶ ಪ್ರಕಟಿಸದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಮತ್ತು ಬಿಜೆಪಿ ಜಿಲ್ಲಾ ಕಾರ್ಮಿಕ ಪ್ರಕೋಷ್ಠದ ಸದಸ್ಯ ಧರ್ಮರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೇಣೂರು ಗ್ರಾಪಂನ ಎಲ್ಲ ೨೪ ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ವೀಣಾ ದೇವಾಡಿಗ, ಲೀಲಾವತಿ ಬಜಿರೆ, ಸಂಭಾಷಣಿ, ಮಲ್ಲಿಕಾ ಕಾಶಿನಾಥ್ ಹೆಗ್ಡೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೋಕಯ್ಯ ಪೂಜಾರಿ, ಉಮೇಶ್ ಎನ್. ಆಕಾಂಕ್ಷಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಜು.14ರಂದು ಪಕ್ಷವು ಆಂತರಿಕ ಚುನಾವಣೆ ನಡೆಸಿತ್ತು. ಚುನಾವಣಾ ಪ್ರಭಾರಿಗಳಾಗಿ ಸೀತಾರಾಮ ಬೆಳಾಲ್ ಮತ್ತು ಪ್ರಶಾಂತ್ ಪಾರೆಂಕಿ ಹಾಜರಿದ್ದು, ಇವರ ನೇತೃತ್ವದಲ್ಲಿ ಮತದಾನ ನಡೆದಿತ್ತು. ಮತದಾನದ ಬಳಿಕ ಸ್ಥಳದಲ್ಲೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವರ ಹೆಸರುಗಳನ್ನು ಘೋಷಿಸಬೇಕಿತ್ತು. ಆದರೆ ಇದುವರೆಗೂ ಫಲಿತಾಂಶವನ್ನು ಬಹಿರಂಗಪಡಿಸಿಲ್ಲ. ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ. ಆದರೆ, ಚುನಾವಣೆ ನಡೆಸಿದ ನಂತರ ಫಲಿತಾಂಶ ಪ್ರಕಟಿಸಬೇಕಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದರೆ ಅಧ್ಯಕ್ಷರಾಗಿ ಮಲ್ಲಿಕಾ ಕಾಶಿನಾಥ ಹೆಗ್ಡೆ, ಉಪಾಧ್ಯಕ್ಷರಾಗಿ ಉಮೇಶ್ ಎನ್. ಆಯ್ಕೆಯಾಗುತ್ತಿರಲಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಅನೂಪ್ ಜೆ. ಪಾಯಸ್ ಮತ್ತು ಧರ್ಮರಾಜ್ ತಿಳಿಸಿದ್ದಾರೆ.