Site icon Suddi Belthangady

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಅನುದಾನ ಹಂಚಿಕೆಯಲ್ಲಿ ತೀವ್ರ ಅನ್ಯಾಯ- ಕರಾವಳಿ ಹಾಗೂ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಶಾಸಕ ಹರೀಶ್ ಪೂಂಜ ವಿಧಾನ ಸಭೆಯಲ್ಲಿ ಒತ್ತಾಯ

ಬೆಳ್ತಂಗಡಿ: ಕರಾವಳಿಯಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಕೆಟ್ಟು ಹೋಗಿದೆ. ಆದರೆ ಲೋಕೋಪಯೋಗಿ ಇಲಾಖೆಯಿಂದ ಯಾವುದೇ ಅನುದಾನ ಬಂದಿಲ್ಲ ಸರಕಾರ ಕೂಡಲೇ ಕರಾವಳಿ ಹಾಗೂ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿಧಾನ ಸಭೆಯಲ್ಲಿ ಒತ್ತಾಯಿಸಿದ್ದಾರೆ.

ವಿಧಾನ ಸಭೆಯಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಅನುದಾನ ಹಂಚಿಕೆಯ ಪಟ್ಟಿಯನ್ನು ನೋಡಿದಾಗ ಕರಾವಳಿ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ತೀವ್ರ ಅನ್ಯಾಯ ಮಾಡಿರುವುದು ಕಂಡು ಬರುತ್ತದೆ. ಅಭಿವೃದ್ಧಿ ವಿಷಯವನ್ನು ರಾಜಕಾರಣಕ್ಕೆ ತೆಗೆದುಕೊಂಡು ಹೋಗಬೇಡಿ ಎಂದು ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.

ಈ ಸಲ ಸುರಿದ ಮಳೆಗೆ ಕರಾವಳಿ ಜಿಲ್ಲೆಗಳ ರಸ್ತೆಗಳು ವಾಹನ ಸಂಚರಿಸಲು ಆಗದಷ್ಟು ಹದಗೆಟ್ಟು ಹೋಗಿವೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಅನುದಾನ ಹಂಚಿಕೆಯಲ್ಲಿ ತೀವ್ರ ಅನ್ಯಾಯ ಆಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳು ಅತಿವೃಷ್ಟಿಯಾಗುವ ಜಿಲ್ಲೆಗಳಾಗಿವೆ. ಆದರೆ, ಬೇರೆ ಜಿಲ್ಲೆಗಳಿಗೆ ನೀಡಿದಷ್ಟು ಅನುದಾನವನ್ನು ಈ ಜಿಲ್ಲೆಗಳಿಗೆ ನೀಡಲಾಗಿಲ್ಲ. ಅತ್ಯಂತ ಹೆಚ್ಚು ಮಳೆ ಬೀಳುವ ಕರಾವಳಿ ಜಿಲ್ಲೆಗಳಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಿದ್ದು ಸರಕಾರ ಗಮನಹರಿಸಬೇಕು ಎಂದು ಗಮನ ಸೆಳೆದರು.

ಉತ್ತರಿಸಿದ ಲೋಕೋಪಯೋಗಿ ಸಚಿವರು ಯಾವುದೇ ತಾರತಮ್ಯ ಮಾಡದೆ ಅನುದಾನ ಒದಗಿಸುವುದಾಗಿ ತಿಳಿಸಿದರು. ಶಾಸಕ ಹರೀಶ್ ಪೂಂಜ ಅವರೊಂದಿಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಇತರರು ಧ್ವನಿ ಗೂಡಿಸಿದರು.

Exit mobile version