Site icon Suddi Belthangady

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ- ಉತ್ತಮ ಕೆಲಸಗಳ ಮೂಲಕ ಸಾಹಿತ್ಯವನ್ನು ಎತ್ತರಕ್ಕೇರಿಸಿ: ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು

ಬೆಳ್ತಂಗಡಿ: ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದು ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಹೆಗಲೇರಿದೆ. ಉತ್ತಮ ಕಾರ್ಯಗಳ ಮೂಲಕ ಸಾಹಿತ್ಯವನ್ನು ಎತ್ತರಕ್ಕೇರಿಸುವ ಕಾರ್ಯಗಳು ನೂತನ ಪದಾಧಿಕಾರಿಗಳಿಂದ ನಡೆಯಲಿ ಎಂದು ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ ಇದರ ಬೆಳ್ತಂಗಡಿ ತಾಲೂಕು ಘಟಕದ ನೂತನ ಸಾಲಿನ ಪದಾಧಿಕಾರಿಗಳಿಗೆ ಜು. 21ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಇರುವ ಪ್ರಣವ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಿ ಅವರು ಮಾತನಾಡುತ್ತಿದ್ದರು.

ಅತಿಥಿಯಾಗಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಘಟಕದ ಅಧ್ಯಕ್ಷ ಗಣಪತಿ ಭಟ್ ಕುಳಮರ್ವ ಮಾತನಾಡಿ, ಉತ್ತಮ ರಸಭರಿತ ಪದಪುಂಜಗಳ ಸಾಹಿತ್ಯದ ರಸದೌತಣ ಇಂದಿನ ಯುವ ಬರಹಗಾರರಿಂದ ಮೂಡಬೇಕಾಗಿದೆ. ಅದಕ್ಕಾಗಿ ಮಾಹಿತಿ ನೀಡುವ ಉತ್ತಮ ಕಾರ್ಯಗಳು ಈ ಚುಟುಕು ಸಾಹಿತ್ಯ ವೇದಿಕೆಯಿಂದ ನಡೆಯಲಿ ಎಂದರು. ಇನ್ನೋರ್ವ ಅತಿಥಿ, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಯದುಪತಿ ಗೌಡ ಮಾತನಾಡಿ, ಮಕ್ಕಳಲ್ಲಿ, ಯುವಕರಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವ ಕಾರ್ಯಗಳಾಗಬೇಕಾಗಿದೆ ಎಂದರು.

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್, ಹಿರಿಯ ಸಾಹಿತಿಗಳೂ ಮಾರ್ಗದರ್ಶಕರೂ ಆಗಿರುವ ಸದಾನಂದ ನಾರಾವಿ ಅವರು ಮುಖ್ಯ ಅತಿಥಿಗಳಾಗಿ ಪಾಲು ಪಡೆದರು. ಉಡುಪಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಾ.ವೀ ಕೃಷ್ಣದಾಸ್ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಗೌರವ ಉಪಸ್ಥಿತಿಯೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಂಘದ ಉಪಾಧ್ಯಕ್ಷ ವಿಜಯ ಕುಮಾರ್ ಜೈನ್ ಅರ್ವ ಅತಿಥಿಗಳಿಗೆ ಪುಸ್ತಕ ಕೊಡುಗೆ ನೀಡಿ ಗೌರವಿಸುವ ಮೂಲಕ ಸಂಘದ ಬೆನ್ನೆಲುಬಾದರು.ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವಿಜ ಶ್ರೀಧರ್ ಸ್ವಾಗತಿಸಿದರು. ನೂತನ ಸಾಲಿನ ಅಧ್ಯಕ್ಷ ಶಿವಪ್ರಸಾದ್ ಕೊಕ್ಕಡ ಪ್ರಸ್ತಾವನೆಯ ಮೂಲಕ ದನಿಯಾದರು.

ಪ್ರಥಮ ಚುಟುಕು ಕವಿಗೋಷ್ಠಿ: ತಂಡದ ಪ್ರಥಮ ಹೆಜ್ಜೆಯಾಗಿ ಅರುಣಾ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು.ಚಂದ್ರಹಾಸ ಕುಂಬಾರ ಬಂದಾರು, ಆರ್ಯನ್ ಸವನಾಲ್, ರಾಮಕೃಷ್ಣ ಉಪ್ಪಿನಂಗಡಿ, ವಿನುತಾ ರಜತ್ ಗೌಡ ಉಜಿರೆ, ಚೇತನಾ ಕಾರ್ಯತಡ್ಕ, ಮೇಘನಾ ಪ್ರಶಾಂತ್, ಅಶ್ವಥ್ ಕುಲಾಲ್, ಉಷಾ ಶಶಿಧರ್, ವನಜಾ ಜೋಶಿ ಹಾಗೂ ನವ್ಯ ಪ್ರಸಾದ್ ನೆಲ್ಯಾಡಿ ಅವರು ಚುಟುಕುಗಳನ್ನು ವಾಚಿಸಿದರು. ಕವಿಗಳಿಗೆ ಪುಸ್ತಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು. ಕುಮಾರಿ ಧನ್ವಿತಾ ಕಾರಂತ್ ಅವರು ಪ್ರಾರ್ಥನೆ ಮಾಡಿದರು. ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರೂಪಿಸಿದರು.ಸಂಘಟನಾ ಉಸ್ತುವಾರಿ ಆರ್ಯನ್ ಸವಣಾಲು ಧನ್ಯವಾದವಿತ್ತರು.‌

Exit mobile version