Site icon Suddi Belthangady

ಧರ್ಮಸ್ಥಳ: ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ- ಶುದ್ಧನೀರು ನಮ್ಮ ಆರೋಗ್ಯ ಕಾಪಾಡಲು ಪ್ರಕೃತಿಯು ನೀಡಿದ ಕೊಡುಗೆ: ಹೇಮಾವತಿ ವಿ.ಹೆಗ್ಗಡೆ

ಧರ್ಮಸ್ಥಳ: ನೀರು ಅತೀ ಅಮೂಲ್ಯವಾದ ಸಂಪತ್ತಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡಲು ಪ್ರಕೃತಿಯು ನೀಡಿದ ಕೊಡುಗೆಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆಯವರು ಶುದ್ಧಗಂಗಾ ಪ್ರೇರಕರಿಗೆ ಮಾರ್ಗದರ್ಶನ ನೀಡುತ್ತಾ ತಿಳಿಸಿದರು.

ಶ್ರೀ ಕ್ಷೇತ್ರದ ಧರ್ಮಸ್ಥಳದ ಚರ್ತುದಾನಗಳಲ್ಲಿ ಔಷಧ ದಾನವೂ ಒಂದು. ಶುದ್ಧನೀರು ಮನುಷ್ಯನಿಗೆ ಆರೋಗ್ಯಯುತವಾಗಿರಲು ಪ್ರಕೃತಿಯು ನೀಡಿದ ಕೊಡುಗೆಯಾಗಿದ್ದು, ನೀರು ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಜನ ಸಾಮಾನ್ಯರು ಪರಿಶುದ್ಧ ನೀರನ್ನು ಸೇವಿಸದೆ ಪ್ಲೋರೈಡ್, ಕ್ಲೋರೈಡ್‌ನಿಂದ ಕೂಡಿದ ಅಶುದ್ಧ ನೀರನ್ನು ಕುಡಿಯುವುದರಿಂದ ಮುಖ್ಯವಾಗಿ ಮಹಿಳೆಯರ ಮತ್ತು ಮಕ್ಕಳ ಮೇಲೆ ಆಗುತ್ತಿರುವ ಅನಾರೋಗ್ಯ ಸಮಸ್ಯೆಯನ್ನು ಮನಗಂಡು ಎಲ್ಲಿ ನೋವಿದೆಯೋ ಅಲ್ಲಿ ಔಷಧಿ ನೀಡಬೇಕೆಂದು ಶುದ್ಧ ನೀರಿನ ಸಮಸ್ಯೆ ಇರುವಲ್ಲಿ ಯೋಜನೆ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ.

ನೀರನ್ನು ಪೂಜ್ಯನೀಯ ಭಾವನೆಯಿಂದ ನೋಡಿ ಗಂಗಾಪೂಜೆ, ತೀರ್ಥ, ಅಭಿಷೇಕಗಳಲ್ಲಿ ಬಳಸಲಾಗುತ್ತಿದ್ದು ಮಾನವ ಇಚ್ಛ್ಟಾ ಶಕ್ತಿ ಇಲ್ಲದೆ ಪ್ರಕೃತಿ ನೀಡಿದ ಕೊಡುಗೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿ ಮಲಿನ ಮಾಡಿರುವುದರಿಂದ ಇವತ್ತು ನಾವು ಸೇವಿಸುವ ಆಹಾರ, ನೀರು, ಗಾಳಿ, ಭೂಮಿ ಎಲ್ಲಾ ವಿಷಯುಕ್ತವಾಗಿದೆ. ಪ್ರಕೃತಿದತ್ತ ಕೊಡುಗೆಯನ್ನು ಉಳಿಸಿ ಬೆಳೆಸುವ ಬಗ್ಗೆ ಎಲ್ಲರೂ ಜಾಗೃತರಾಗಬೇಕಾಗಿದೆ. ಶುದ್ಧಗಂಗಾ ಘಟಕದ ಶುದ್ಧ ನೀರನ್ನು ಸೇವಿಸುವುದರಿಂದ ಅದೆಷ್ಟೋ ಜನರ ಆರೋಗ್ಯ ರಕ್ಷಣೆಯಾಗಿದೆ. ಅವರ ಜೀವನಮಟ್ಟದಲ್ಲಿ ಪರಿವರ್ತನೆಯಾಗಿದೆ ಈ ಬಗ್ಗೆ ಇನ್ನಷ್ಟು ಜನರಿಗೆ ಮಾಹಿತಿ ನೀಡಿ ಅವರಲ್ಲಿ ಇಚ್ಛ್ಟಾ ಶಕ್ತಿ ಮೂಡಿಸಿ ನಿರಂತರ ಶುದ್ಧನೀರಿನ ಬಳಕೆ ಮಾಡುವಂತೆ ಎಲ್ಲಾ ಪ್ರೇರಕರು ಪ್ರಯತ್ನಿಸಿ ಜನಮನ ತಲುಪಿದರೆ ಅದು ಪುಣ್ಯದ ಕೆಲಸ ಎಂದು ಹೇಮಾವತಿ ವಿ.ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಂದು ರಾಜ್ಯಾದ್ಯಂತ ಶುದ್ಧಗಂಗಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಕರಿಗೆ ಮಾರ್ಗದರ್ಶನ ನೀಡುತ್ತಾ ತಿಳಿಸಿದರು.

ಕಾರ್ಯಗಾರದಲ್ಲಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್‌ಕುಮಾರ್ ಎಸ್.ಎಸ್‌ರವರು ಭಾಗವಹಿಸಿ ಯೋಜನೆಯು ಶ್ರೀ ಕ್ಷೇತ್ರದ ಅನೇಕ ಸೇವೆಗಳನ್ನು ಸಮಾಜದ ಜನ ಸಾಮಾನ್ಯರಿಗೆ ನೀಡುತ್ತಾ ಬಂದಿದೆ. ಇದರ ನಿರಂತರತೆಯನ್ನು ಕಾಯ್ದುಕೊಂಡು ನಮ್ಮ ಕೆಲಸವನ್ನು ಸದಾ ಸೇವಾ ಮನೋಭಾವನೆಯಿಂದ ಮಾದರಿಯಾಗಿ ಶ್ರೇಷ್ಠತೆಯನ್ನು ಉಳಿಸಿಕೊಂಡು ಮಾಡಿದರೆ ಅದು ಭಗವಂತನ ಸೇವೆ ಆಗುತ್ತದೆ.ಇದರಿಂದ ಸೇವೆಯ ಮೌಲ್ಯ ಹೆಚ್ಚುತ್ತದೆ ಎಂದು ತಿಳಿಸಿದರು.

ಜುಲೈ16, 17ರಂದು ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ಜರುಗಿದ ಪ್ರೇರಕರ ಪ್ರೇರಣಾ ಕಾರ್ಯಗಾರದಲ್ಲಿ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ವಿಭಾಗದ ನಿರ್ದೇಶಕ ಶಿವಾನಂದ ಆಚಾರ್ಯ, ಯೋಜನಾಧಿಕಾರಿ ಯುವರಾಜ್ ಜೈನ್, ಬೆಳ್ತಂಗಡಿ ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಅಧಿಕಾರಿ ವರ್ಗದವರು ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ಪ್ರೇರಕರಿಗೆ ಪ್ರೇರಣಾದಾಯಕ ಮಾಹಿತಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಸಮುದಾಯ ಅಭಿವೃದ್ಧಿಯ ಆಶಯವನ್ನಿಟ್ಟುಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅನೇಕ ಜನಪರ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ್ದು, ಅವುಗಳಲ್ಲಿ ಶುದ್ಧಗಂಗಾ ಕಾರ್ಯಕ್ರಮವೂ ಒಂದು. ಜನ ಸಾಮಾನ್ಯರು ಶುದ್ಧನೀರನ್ನು ಬಳಸಿ ಖಾಯಿಲೆಯಿಂದ ಮುಕ್ತರಾಗಿ ಆರೋಗ್ಯ ಪೂರ್ಣ ಜೀವನ ನಡೆಸುವ ಉದ್ದೇಶದಿಂದ ಆರಂಭಗೊAಡ ಶುದ್ಧಗಂಗಾ ಕಾರ್ಯಕ್ರಮದಲ್ಲಿ ಶುದ್ಧ ನೀರಿನ ಸಮಸ್ಯೆ ಇರುವ ರಾಜ್ಯದ ವಿವಿಧ ಗ್ರಾಮಗಳಲ್ಲಿ 2009ರಿಂದ ಇದುವರೆಗೆ ಒಟ್ಟು 457 ಶುದ್ಧಗಂಗಾ ಘಟಕಗಳನ್ನು ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿ ಪ್ರತೀನಿತ್ಯ 5.91 ಲಕ್ಷ ಜನರಿಗೆ ಶುದ್ಧ ನೀರನ್ನು ಒದಗಿಸುತ್ತಿದೆ.

Exit mobile version