ಬೆಳ್ತಂಗಡಿ: ಕಲಿಕೆ ಎನ್ನುವುದು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಬೇರೆ ಬೇರೆ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವುದು ಶಾಲೆಯ ಜವಬ್ದಾರಿ.ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ವಿವಿಧ ಸಂಘ ಚಟುವಟಿಕೆಗಳನ್ನು ನಡೆಸಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ರೂಪಿಸುವ ಕಾರ್ಯವನ್ನು ನಡೆಸುತ್ತಿದೆ. ಇದಕ್ಕೆ ಜುಲೈ 11ರಂದು ನಡೆದ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸಾಕ್ಷಿಯಾಯಿತು.
ಶಾಲಾ ಸಂಚಾಲಕ ಅತೀ ವಂ.ಫಾ.ವಾಲ್ಟರ್ ಡಿಮೆಲ್ಲೋ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿದ್ಯಾರ್ಥಿಗಳು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ನುಡಿದು ಶುಭ ಹಾರೈಸಿದರು. ಶಾಲಾ ಕನ್ನಡ ಸಂಘ, ಇಂಗ್ಲಿಷ್ ಸಂಘ, ಹಿಂದಿ ಸಂಘ, ಗಣಿತ ಸಂಘ, ವಿಜ್ಞಾನ ಸಂಘ, ಪರಿಸರ ಸಂಘ ಹಾಗೂ ಸ್ಕೌಟ್ ಗೈಡ್ಸ್ ಕಬ್ಸ್ ಬುಲ್ ಬುಲ್ ಸಂಘಗಳ ನಾಯಕರು ತಮ್ಮ ತಮ್ಮ ಸಂಘದ ಸಂಕೇತ ಮತ್ತು ಉದ್ದೇಶಗಳನ್ನು ಹೇಳಿದರು.
ಪರಿಸರ ಸಂಘದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು, ವಿಜ್ಞಾನ ಸಂಘವು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಬಗ್ಗೆ, ಗಣಿತ ಸಂಘವು ಮೋಜಿನ ಗಣಿತವನ್ನು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಸಂಘಗಳು ಭಾಷೆ ಮತ್ತು ಜಾನಪದ ಶೈಲಿಯನ್ನು, ಕಬ್ಸ್ ಬುಲ್ ಬುಲ್ಸ್ ಸ್ಕೌಟ್ ಮತ್ತು ಗೈಡ್ಸ್ ಸಂಘಗಳು ದೇಶಪ್ರೇಮ ಹಾಗೂ ತುರ್ತು ಸೇವೆಗೆ ಸದಾ ಸಿದ್ಧ ಎಂಬ ಈ ಎಲ್ಲಾ ಧೋರಣೆಯನ್ನು ಹೊಂದಿದ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ಇಂತಹ ಸಂಘ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ದೊರೆಯುವ ಪ್ರಯೋಜನದ ಕುರಿತು ತಿಳಿಸಿ ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ಸೋನಲ್ ಡಿ’ಸೋಜ ಸ್ವಾಗತಿಸಿ, ಮಹಮ್ಮದ್ ಶಹಾಲ್ ವಂದಿಸಿದರು. ಸಫಾ ಅಹ್ಮದ್, ರಾಹುಲ್, ಸನಾ ಮರಿಯಮ್ ಹಾಗೂ ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಮೇರಿ ಸುಜಾ ಮತ್ತು ಶ್ರೀಲತಾ ಸಹಕರಿಸಿದರು.