Site icon Suddi Belthangady

ಕೊಯ್ಯೂರು: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕೊಯ್ಯೂರು: “ಸಕರಾತ್ಮಕ ಯೋಚನೆಗಳಿಂದ ಗುರಿ ಸಾಧನೆ ಸಾಧ್ಯ. ನಾವು ಸಾಗುತ್ತಿರುವ ದಾರಿಯ ಬಗ್ಗೆ ಜಾಗ್ರತೆ ವಹಿಸಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ” ಎಂದು ಬೆಳ್ತಂಗಡಿ ಜೆ.ಎಮ್.ಎಫ್.ಸಿ. ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಧೀಶ ವಿಜಯೇಂದ್ರ ಟಿ.ಹೆಚ್. ಅಭಿಪ್ರಾಯಪಟ್ಟರು.ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಹಾಗೂ ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಕ್ಸೋ ಕಾಯಿದೆ ಹಾಗೂ ಬಾಲ್ಯ ವಿವಾಹ ಕುರಿತ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ರವರು “ಹಕ್ಕು ಮತ್ತು ಕರ್ತವ್ಯ ಇವೆರಡರ ಜ್ಞಾನ ಪ್ರತಿಯೊಬ್ಬರೂ ಪಡೆಯಬೇಕು. ನಮ್ಮ ಹಕ್ಕು ಇನ್ನೊಬ್ಬರಿಗೆ ತೊಂದರೆ ಉಂಟುಮಾಡಿದರೆ ಅದು ಹಕ್ಕುಚ್ಯುತಿಯಾಗುತ್ತದೆ” ಎಂದು ಅನಿಸಿಕೆ ವ್ಯಕ್ತಪಡಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ. ಯವರು ವಿವಿಧ ನಿದರ್ಶನಗಳ ಮೂಲಕ ಪೋಕ್ಸೋ ಕಾಯಿದೆ ವ್ಯಾಪ್ತಿ ಹಾಗೂ ಅಪ್ರಾಪ್ತ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಕಾನೂನು ಯಾವ ರೀತಿ ರಕ್ಷಣೆ ನೀಡುತ್ತದೆ ಎಂಬ ಬಗ್ಗೆ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊoಡಿದ್ದರು.

ವೇದಿಕೆಯಲ್ಲಿ ಯುವ ನ್ಯಾಯವಾದಿ ಯಕ್ಷಿತಾ ಉಪಸ್ಥಿತರಿದ್ದರು. ನ್ಯಾಯಾಲಯದ ಸಿಬ್ಬಂದಿ ಯಲ್ಲಪ್ಪ ಮತ್ತು ಕಾನೂನು ಸ್ವಯಂ ಸೇವಕ ರಾಘವೇಂದ್ರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.ವಿದ್ಯಾರ್ಥಿನಿಯರಾದ ಭವ್ಯ,ರಂಝಿನ, ಪ್ರಜ್ಞಾ, ನಿಶ್ಮಿತಾ, ಕವಿತಾ ಪ್ರಾರ್ಥನೆಗೈದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಪ್ರೀತಿ ಸ್ವಾಗತಿಸಿ, ಉಪನ್ಯಾಸಕಿ ಭವ್ಯ ಎಮ್. ವಂದಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು.

Exit mobile version