ಬೆಳ್ತಂಗಡಿ: ಅನುಗ್ರಹ ಶಿಕ್ಷಣ ಸಂಸ್ಥೆಯ ಪಾಲಕ ಪೋಷಕರ ಸಭೆಯು ಶಾಲಾ ಸಂಚಾಲಕರಾದ ವಂ! ಫಾ! ಅಬೆಲ್ ಲೋಬೋರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.
ಶಾಲಾ ಮಕ್ಕಳು ಸ್ವಾಗತ ನೃತ್ಯ ಮಾಡಿದರು. ಶಾಲಾ ಸಂಚಾಲಕರು, ವೇದಿಕೆಯಲ್ಲಿರುವ ಅತಿಥಿಗಳ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ವಾರ್ಷಿಕ ವರದಿಯನ್ನು ಶ್ರೀಮತಿ ಹೇಮಾಲತಾ ಮಂಡಿಸಿದರು. ಶಾಲೆಯ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ರವರು ಪ್ರಾಸ್ತವಿಕವಾಗಿ ಮಾತನಾಡಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಸರ್ವರ ಸಹಕಾರ ಕೋರಿದರು.
ತದನಂತರ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ 7 ಜನ ವಿದ್ಯಾರ್ಥಿಗಳನ್ನು ಅವರ ಹೆತ್ತವರೊಡನೆ ಸನ್ಮಾನಿಸಲಾಯಿತು. ಮಡಂತ್ಯಾರು ಕಾಲೇಜಿನ ಉಪನ್ಯಾಸಕರಾದ ಪ್ರೋಫೆಸರ್ ಲಿಯೋ ನೊರೋನ್ಹಾರವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ “ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ” ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘಕ್ಕೆ ನೂತನ ಸದಸ್ಯರನ್ನು ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷ ಸ್ಥಾನದಿಂದ ಶಾಲಾ ಸಂಚಾಲಕರು ಮಾತನಾಡಿ ಎಲ್ಲರಿಗೂ ಶುಭವನ್ನು ಕೋರಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಡಾ.ಪ್ರಶಾಂತ್, ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಆಂಟನಿ ಫೆರ್ನಾಂಡೀಸ್ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಅನಿತಾ ಮೋನಿಸ್, ಶ್ರೀ ಶಿನು ಹಾಗೂ ಕಾರ್ಯದರ್ಶಿ ಮೇರಿ ಟಿ.ಎಂ ಉಪಸ್ಥಿತರಿದ್ದರು.
ರವಿ ಕುಮಾರ್‌ಯವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಪಿತಾ ಸ್ವಾಗತಿಸಿ ಅಶ್ವಿನಿಯವರು ವಂದಿಸಿದರು.
ರಾಷ್ಟಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.