ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಸ್ಫೋಟಕ ಕಾಯ್ದೆಯಡಿ ಬಂಧಿತರಾಗಿದ್ದ ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ನಿಂದಿಸಿ ಬೆದರಿಸಿದ ಆರೋಪದಡಿ ಎರಡು ಪ್ರತ್ಯೇಕ ಕ್ರಿಮಿನಲ್ ಕೇಸ್‌ಗೆ ಒಳಗಾಗಿರುವ ಶಾಸಕ ಹರೀಶ್ ಪೂಂಜ ಅವರು ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜುಲೈ 5ರಂದು ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಚಾರ್ಚ್ ಶೀಟ್ ಸಲ್ಲಿಕೆಯಾದ ಬಳಿಕ ತಾನು ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್ ನ್ಯಾಯಪೀಠ ವಿಚಾರಣಾ ನ್ಯಾಯಾಲಯದಲ್ಲಿಯೇ ತನಿಖೆ ಎದುರಿಸಿ ಎಂದು ಸೂಚಿಸಿದೆ.
ಕಾಲಾವಕಾಶ ಕೇಳಿದ್ದ ಹರೀಶ್ ಪೂಂಜ ಪರ ವಕೀಲರು: ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ಆಕ್ರಮ ದಾಸ್ತಾನು ಮಾಡಿದ್ದ ಆರೋಪದಡಿ ಬಂಧಿತರಾಗಿದ್ದ ಬಿಜೆಪಿ ತಾಲೂಕು ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ 18ರಂದು ರಾತ್ರಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಮತ್ತು ಮೇ 20ರಂದು ತಾಲೂಕು ಆಡಳಿತ ಸೌಧದಲ್ಲಿ ಪ್ರತಿಭಟನೆ ನಡೆಸಿ ಪೊಲೀಸರನ್ನು ನಿಂದಿಸಿ ಬೆದರಿಸಿದ ಆರೋಪದಡಿ ತನ್ನ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿ ಶಾಸಕ ಹರೀಶ್ ಪೂಂಜ ಅವರು ಸಲ್ಲಿಸಿದ್ದ ಅರ್ಜಿಯನ್ನು ಮೇ ೩೧ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶಾಸಕ ಹರೀಶ್ ಪೂಂಜ ಅವರ ವರ್ತನೆಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತಲ್ಲದೆ ಅರ್ಜಿಯ ವಿಚಾರಣೆಯನ್ನು ಮುಂದೂಡಿತ್ತು. ಜೂನ್ ೭ರಂದು ಎರಡನೇ ಬಾರಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ಅರ್ಜಿಯ ವಿಚಾರಣೆ ನಡೆಸಿದ್ದ ವೇಳೆ ಶಾಸಕ ಹರೀಶ್ ಪೂಂಜ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಅವರು ಈ ಪ್ರಕರಣದಲ್ಲಿ ಪೊಲೀಸರು ತಮ್ಮ ಕಕ್ಷಿದಾರರಿಗೆ ಅನಗತ್ಯ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಹೆಚ್ಚುವರಿ ಸರಕಾರಿ ಅಭಿಯೋಜಕರು ಪ್ರಕರಣದಲ್ಲಿ ಅರ್ಜಿದಾರ ಆರೋಪಿಯನ್ನು ವಿಚಾರಣೆಗಾಗಿ ಮತ್ತು ಸಾಕ್ಷಿ ಸಂಗ್ರಹಕ್ಕಾಗಿ ಪೊಲೀಸರು ಠಾಣೆಗೆ ಕರೆದಿದ್ದಾರೆ ಹೊರತು ಬೇರೆ ಯಾವುದೇ ದುರುದ್ದೇಶ ಇಲ್ಲ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನು ದಾಖಲಿಸಿಕೊಂಡಿದ್ದ ನ್ಯಾಯಪೀಠ ಅರ್ಜಿದಾರರನ್ನು ಬಂಧಿಸುವ ಅಥವಾ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುವ ಪ್ರಕ್ರಿಯೆಯನ್ನು ಸದ್ಯಕ್ಕೆ ಮಾಡದಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಜೂ.೨೮ಕ್ಕೆ ಮುಂದೂಡಿದ್ದರು. ಜೂನ್ ೨೮ರಂದು ಅರ್ಜಿಯ ವಿಚಾರಣೆ ನಡೆದಾಗ ಶಾಸಕ ಹರೀಶ್ ಪೂಂಜ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೇಳಿದ್ದರಿಂದ ಮುಂದಿನ ವಿಚಾರಣೆಯನ್ನು ಜುಲೈ ೫ಕ್ಕೆ ಮುಂದೂಡಲಾಗಿತ್ತು.ವಾದ ಪ್ರತಿವಾದ ಆಲಿಸಿದ ಬಳಿಕ ಜುಲೈ 5ರಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದು ವಿಚಾರಣಾ ನ್ಯಾಯಾಲಯದಲ್ಲಿ ತನಿಖೆ ಎದುರಿಸಬೇಕು. ಪೊಲೀಸರ ಕ್ರಮ ಸರಿಯಾಗಿ ಇರದಿದ್ದಲ್ಲಿ ಅಲ್ಲಿಯೇ ಡಿಜ್ಚಾರ್ಜ್ ಅಪ್ಲಿಕೇಶನ್ ಹಾಕಿಕೊಳ್ಳಿ. ದೋಷಾರೋಪಣಾ ಪಟ್ಟಿ ಸಲ್ಲಿಕೆ ಆಗಿರುವ ಈ ಸಮಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ಠಾಣೆಗೆ ಹೋಗಲು ಮುಜುಗರ ಏಕೆ ಎಂದು ಪ್ರಶ್ನಿಸಿದ ಹೈಕೋರ್ಟ್: ಮೇ 18ರಂದು ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಇತರರ ವಿರುದ್ಧ ಐಪಿಸಿ 143, 147, 341, 353, 506ರಡಿ ದಾಖಲಾಗಿರುವ ಕೇಸ್ ಮತ್ತು ಮೇ 20ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಶಾಸಕ ಹರೀಶ್ ಪೂಂಜ ಮತ್ತು ಇತರರ ವಿರುದ್ಧ 143, 147, 341, 504, 506ರಡಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ಪ್ರಕರಣದ ತನಿಖಾಧಿಕಾರಿಯಾಗಿರುವ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಬಿ.ಜಿ. ಅವರು ಈಗಾಗಲೇ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್ ಸಲ್ಲಿಸಿದ್ದಾರೆ. ಪ್ರಥಮ ಕೇಸ್‌ನಲ್ಲಿ ಆರೋಪಿಗಳಾಗಿರುವ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ ಆರೋಪಿಗಳಾಗಿರುವ 37 ಮಂದಿಗೆ ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರ ಎದುರು ಹಾಜರಾಗುವಂತೆ ಈಗಾಗಲೇ ಸಮನ್ಸ್ ಜಾರಿಯಾಗಿದೆ. ಈ ಮಧ್ಯೆ ಆರೋಪಿಗಳ ಪೈಕಿ ಕಾರ್ಯಕರ್ತರೋರ್ವರು ತನಿಖೆಗೆ ತಡೆ ನೀಡುವಂತೆ ಪ್ರತ್ಯೇಕವಾಗಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಗೊಳಿಸಿದ ನ್ಯಾಯಮೂರ್ತಿ ಅವರು ತನಿಖೆಗೆ ತಡೆ ನೀಡಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯದಲ್ಲಿ ತನಿಖೆ ಎದುರಿಸಿ. ವಿಚಾರಣೆಗೆ ಪೊಲೀಸ್ ಠಾಣೆಗೆ ಹೋಗಲು ಮುಜುಗರ ಆಗುತ್ತದೆ ಎಂಬ ತಮ್ಮ ವಾದವನ್ನು ಒಪ್ಪಲು ಸಾಧ್ಯವಿಲ್ಲ. ಎಂತಹ ಪ್ರಮುಖರೆಲ್ಲಾ ವಿಚಾರಣೆ ಎದುರಿಸಲು ಠಾಣೆಗೆ ಹೋಗುತ್ತಾರೆ.ಹಾಗಾಗಿ ನಿಮ್ಮ ವಾದ ಒಪ್ಪಲಾಗದು ಎಂದು ನ್ಯಾಯಪೀಠ ತಿಳಿಸಿ ಅರ್ಜಿ ಇತ್ಯರ್ಥ ಪಡಿಸಿದೆ.