Site icon Suddi Belthangady

ಉಜಿರೆ: ಶ್ರೀ ಧ.ಮಂ.ಪ.ಪೂ. ಕಾಲೇಜಿಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಭೇಟಿ- ಅವಕಾಶಗಳು ಸಿಕ್ಕಿದಾಗ ಬಾಚಿಕೊಳ್ಳಬೇಕು: ಸವಿತಾ ಎರ್ಮಾಳ್

ಉಜಿರೆ: ನಾವು ನಮ್ಮ ನಿಜವಾದ ಮನಸ್ಸಿನಿಂದ ಉತ್ತಮ ವ್ಯಕ್ತಿಯಾಗಲು ಬಯಸಬೇಕು. ಇದಕ್ಕಾಗಿ ಉತ್ತಮ ಕಾರ್ಯಗಳಿಗಾಗಿ ಸಮಯ ಮೀಸಲಿಡಬೇಕು. ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯನ್ನು ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ಇದಕ್ಕಾಗಿ ಅವಕಾಶಗಳು ಸಿಕ್ಕಿದಾಗ ಬಾಚಿಕೊಳ್ಳಬೇಕು ಎಂದು ಕೊಡಗು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿಗೆ ಅಧಿಕೃತ ಭೇಟಿ ನೀಡಿ ಮಾತನಾಡಿದರು.ಅನೇಕ ಭಾಷೆಗಳೊಂದಿಗೆ ಕೌಶಲ್ಯ ಹೊಂದಿದ್ದರೆ ಯಾರಿಗೂ ಹೆದರುವ ಅಗತ್ಯ ಇಲ್ಲ. ಈ ಮೂಲಕ ಒಳ್ಳೆಯ ಕೆಲಸ ಮಾಡುತ್ತಾ ಹೋಗಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಕಲಿಕೆಯೊಂದಿಗೆ ಸಮಾಜ ಸೇವಾ ಗುಣಗಳನ್ನು ಈಗಿನಿಂದಲೇ ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯಂತ ಸೂಕ್ತ ವೇದಿಕೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸವಿತಾ ಎರ್ಮಾಳ್ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ರಾ.ಸೇ.ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು. ಸಲಹಾ ಸಮಿತಿಯ ಸದಸ್ಯ ರಾಜೇಶ್ ಕಲ್ಲಬೆಟ್ಟು, ಘಟಕದ ನಾಯಕರಾದ ಆದಿತ್ಯ, ಪ್ರಾಪ್ತಿ ಗೌಡ ಉಪಸ್ಥಿರಿದ್ದರು.ಶ್ರಾವಣಿ ಸ್ವಾಗತಿಸಿ, ಆದಿತ್ಯ ವಂದಿಸಿದರು. ಮೇಧಾ ಕುಂದಾಡಿ ನಿರೂಪಿಸಿದರು.

Exit mobile version