ಬೆಳ್ತಂಗಡಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರಾಜ್ಯ ಸರಕಾರಿ ನೌಕರರ ವಿವಿದ್ದೇಶ ಸಹಕಾರಿ ಸಂಘ, ಬೆಳ್ತಂಗಡಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಇದರ ಸಹಕಾರದೊಂದಿಗೆ ಬೆಳ್ತಂಗಡಿ ತಾಲೂಕಿನ ನವ ವಿವಾಹಿತ ದಂಪತಿಗಳು ಮತ್ತು ಗರ್ಭಿಣಿಯರಿಗೆ ಆರೋಗ್ಯವಂತ ಮಗುವಿನ ಸೃಷ್ಟಿ ಎಂಬ ಪರಿಕಲ್ಪನೆಯ ದಂಪತಿ ಆತಿಥ್ಯ ಎಂಬ ನೂತನ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಜು.3ರಂದು ಸಂತೆಕಟ್ಟೆ ಎಸ್.ಡಿ.ಎಮ್. ಸಭಾಭವನದಲ್ಲಿ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಸೌಜನ್ಯ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಇಓ ಭವಾನಿ ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಸರಕಾರಿ ನೌಕರರ ವಿವಿಧೋಶ ಸಹಕಾರಿ ಸಂಘದ ಅಧ್ಯಕ್ಷ ಡಾ ಜಯಕೀರ್ತಿ ಜೈನ್, ಬೆಳ್ತಂಗಡಿ ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿಯ ಸಹ ನಿರ್ದೇಶಕ ಫಾ.ರೋಹನ್ ಕಪುಚಿನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರು ಲೇಡಿಘೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗ ಪ್ರಸಾದ್ ರವರು ಸುರಕ್ಷಿತ ತಾಯ್ತನದ ಅವಶ್ಯಕತೆ, ಅನಪೇಕ್ಷಿತ ಗರ್ಭಧಾರಣೆ, ನ್ಯೂನತೆಯ ಮಗುವಿನ ಜನನ ನಿಯಂತ್ರಣ, ಕುಟುಂಬ ಕಲ್ಯಾಣ ಕಾರ್ಯಕ್ರಮ ಮತ್ತು ಲೇಡಿಘೋಷನ್ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಗರ್ಭಿಣಿಯರಿಗೆ ಪೋಷಕಾಂಶಯುಕ್ತ ತರಕಾರಿ ಮತ್ತು ಪ್ರೋಟಿನ್ ಪೌಡರ್ ಕಿಟ್ ವಿತರಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಕಾರ್ಯಕ್ರಮ ಸಂಯೋಜಿಸಿದರು. ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಆಜಯ್ ಕಾರ್ಯಕ್ರಮ ನಿರೂಪಿಸಿದರು.