Site icon Suddi Belthangady

ಪುದುವೆಟ್ಟು: ಸೈನ್ಸ್ ಕಷ್ಟವೆಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ಬೊಳ್ಮನಾರು ನಿವಾಸಿ, ಬೆಳ್ತಂಗಡಿಯ ಖಾಸಗಿ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ಬೊಳ್ಮನಾರಿನ ವೆಂಕಟೇಶ್ ಎಂಬವರ ಪುತ್ರಿ ಅನಿತಾ(17) ಮೃತ ವಿದ್ಯಾರ್ಥಿನಿ. ಜೂನ್ 29ರಂದು ತಡರಾತ್ರಿ ವಿಷ ಪದಾರ್ಥ ಸೇವಿಸಿದ್ದು, 30ರಂದು ಮುಂಜಾನೆ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಜುಲೈ 3ರಂದು ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾಳೆ.

2 ಪುಟಗಳ ಡೆತ್‌ನೋಟ್‌ ಪತ್ತೆ: ಪುದುವೆಟ್ಟು ವಿದ್ಯಾರ್ಥಿನಿ ಎರಡು ಪುಟಗಳ ಡೆತ್‌ನೋಟ್ ಬರೆದಿರುವುದು ಪತ್ತೆಯಾಗಿದೆ. 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವುದು ಸಾಧ್ಯವಾಗಲಿಲ್ಲ. ವೈದ್ಯೆಯಾಗಬೇಕೆಂಬ ಕನಸು ನನ್ನದಾಗಿದ್ದು, ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ದೆ. ಆದರೆ ಓದುವುದು ಕಷ್ಟವಾಗಿದೆ. ಸೈನ್ಸ್ ನನಗೆ ತುಂಬಾ ಕಷ್ಟವಾಗುತ್ತಿದೆ. ನನ್ನ ಸಾವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣರಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದು ಮೂಲಗಳು ಹೇಳಿವೆ.ಧರ್ಮಸ್ಥಳ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ನೇಹಿತೆಯೂ ಆತ್ಮಹತ್ಯೆ: ಇದೇ ವರ್ಷದ ಫೆಬ್ರವರಿಯಲ್ಲಿ ಧರ್ಮಸ್ಥಳ ನಿವಾಸಿ ಹೈಸ್ಕೂಲ್ ವಿದ್ಯಾರ್ಥಿನಿ ಶಾಲೆಯಲ್ಲೇ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯೂ, ಈಗ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿನಿಯೂ 10ನೇ ತರಗತಿಯಲ್ಲಿ ಕ್ಲಾಸ್‌ಮೇಟ್ ಆಗಿದ್ದು, ಗೆಳತಿಯರಾಗಿದ್ದರು. ಗೆಳತಿ ಆತ್ಮಹತ್ಯೆ ಮಾಡಿಕೊಂಡಿರುವುದೂ ಈಕೆಯ ಮೇಲೆ ಭಾರಿ ಪರಿಣಾಮ ಬೀರಿದ್ದು, ಆಗಾಗ ಬೇಸರ ವ್ಯಕ್ತಪಡಿಸುತ್ತಿದ್ದಳು, ಖಿನ್ನತೆಗೆ ಒಳಗಾಗಿದ್ದಳು.

Exit mobile version