Site icon Suddi Belthangady

ಪತ್ರಿಕಾಗೋಷ್ಠಿ- ಜು.4: ಬೆಳ್ತಂಗಡಿ ರೋಟರಿ ಕ್ಲಬ್ ಪದಗ್ರಹಣ- ಪೂರನ್ ವರ್ಮ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ 54ನೇ ವರ್ಷದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 4ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದಲ್ಲಿ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ರೋ.ಪೂರನ್ ವರ್ಮ ಹೇಳಿದರು.ಅವರು ಜೂ.29ರಂದು ಕಾಶಿಬೆಟ್ಟು ರೋಟರಿ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರೋಟರಿ ಜಿಲ್ಲೆಯ ನಿಯೋಜಿತ ಗವರ್ನರ್ ರೊ.ಮೇಜರ್ ಡೋನರ್ ಪಿ.ಕೆ.ರಾಮಕೃಷ್ಣ, ಸಹಾಯಕ ಗವರ್ನರ್ ರೊ.ಮೊಹಮ್ಮದ್ ವೊಳವೂರು, ವಲಯ ಸೇನಾನಿ ರೊ.ಮನೋರಮಾ ಭಟ್ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಬೆಳ್ತಂಗಡಿ ರೋಟರಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಸರ ಸಂವರ್ಧನಾ ಅಭಿಯಾನ, ಆರೋಗ್ಯ ಜಾಗೃತಿ ಶಿಬಿರ, ಮಹಿಳಾ ಸಬಲೀಕರಣ ಕಾರ್ಯಕ್ರಮಗಳು, ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳು ಹೀಗೆ ವಿವಿಧ ಆಯಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಅಯೋಜಿಸಲಿದ್ದೇವೆ.ರೋಟರಿಯ ಮ್ಯಾಜಿಕ್’ (Magic of Rotary) ಎಂಬ ಧೈಯ ವಾಕ್ಯಗಳೊಂದಿಗೆ ಈ ವರ್ಷ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದೇವೆ.

ಜಿಲ್ಲಾ ಗವರ್ನರ್ ರೊ.ವಿಕ್ರಂ ದತ್ತ ಅವರ ಕಲ್ಪನೆಯಂತೆ ಹಿರಿಯ ನಾಗರೀಕರಿಗಾಗಿ ಸಂಧ್ಯಾ ಸುರಕ್ಷಾ ಯೋಜನೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆ ಸುರಕ್ಷತೆ ಕುರಿತಂತೆ ಜಾಗೃತಿ ಹೀಗೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದೇವೆ. ಅದರೊಂದಿಗೆ ರೋಟರಿ ಬೆಂಗಳೂರು ಇಂದಿರಾ ನಗರ ಕ್ಲಬ್ ಹಾಗೂ ಕ್ಯಾನ್ ಫಿನ್ ಹೋಂ ಸಂಸ್ಥೆಗಳ ಸಹಭಾಗಿತ್ವದಲ್ಲಿ ತಾಲೂಕಿನ ಅಂಗನವಾಡಿಗಳು ಹಾಗೂ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲೆಗಳಿಗೆ ಕಲಿಕಾ ಉಪಕರಣಗಳ ಕೊಡುಗೆ, ಶಾಲೆಗಳಿಗೆ ಸೋಲಾರ್ ವಿದ್ಯುದ್ದೀಕರಣ, ಲ್ಯಾಬ್ ನಿರ್ಮಾಣ ಹೀಗೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಿದ್ದೇವೆ.

ಪರಿಸರ ಜಾಗೃತಿ ಹಾಗೂ ಸಂವರ್ಧನೆಯ ನಿಟ್ಟಿನಲ್ಲಿ ಮಳೆಕೊಯ್ದು, ನೀರಿಂಗಿಸಲು ಸಮುದಾಯದ ಭಾಗವಹಿಸುವಿಕೆಯಿಂದ ಒಡ್ಡುಗಳ ನಿರ್ಮಾಣ ಸಮುದಾಯ ಮಟ್ಟದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದ್ದೇವೆ.ತಾಲೂಕಿನ ಶಿಕ್ಷಕರ ಕೌಶಲ್ಯವರ್ಧನೆಗಾಗಿ ತರಬೇತಿ ಶಿಬಿರದ ಯೋಜನೆ ರೂಪಿಸಲಾಗಿದೆ. ಇನ್ನು ಕೃಷಿಕರಿಗೆ ನೆರವಾಗುವ ನಿಟ್ಟಿನಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳ ಕೊಡುಗೆ ಹಾಗೂ ಜಾನುವಾರಗಳ ಆರೋಗ್ಯಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ನಿಯೋಜಿತ ಕಾರ್ಯದರ್ಶಿ ಸಂದೇಶ್ ರಾವ್, ನಿಯೋಜಿತ ಕೋಶಾಧಿಕಾರಿ ಅಬೂಬಕ್ಕರ್ ಯು.ಹೆಚ್ ಉಪಸ್ಥಿತರಿದ್ದರು.

Exit mobile version