Site icon Suddi Belthangady

ಜಿಲ್ಲಾಧಿಕಾರಿ ಹೇಳಿದ್ರೂ ಕ್ಯಾರೇ ಎನ್ನದ ಹೆದ್ದಾರಿ ಇಲಾಖೆ- ಉಜಿರೆಯಲ್ಲಿ ವಾಹನ ಸವಾರರಿಗೆ ಕೆಸರಿನೋಕುಳಿ- ರಸ್ತೆಯಲ್ಲಿ ಕುಳಿತು ಪ್ರತಿಭಟನೆ- ನಾಳೆ ಮಧ್ಯಾಹ್ನದೊಳಗೆ ಸರಿಪಡಿಸುವ ಭರವಸೆ

ಉಜಿರೆ: ಉಜಿರೆಯ ಅನುಗ್ರಹ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗುತ್ತಿರುವ ತೊಂದರೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ನೀಡಿದ ವೇಳೆಯೂ ಒಂದು ವಾರದೊಳಗೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದರು.

ಆದರೆ ಇಂದು ಭಾರೀ ಮಳೆ ಸುರಿದ ಹಿನ್ನಲೆಯಲ್ಲಿ ರಸ್ತೆ ಸಂಚಾರ ಮತ್ತಷ್ಟು ಹದಗೆಟ್ಟಿತ್ತು. ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾಗ, ಸ್ಥಳೀಯ ಉದ್ಯಮಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ ಕೆಸರು ತುಂಬಿದ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.

ಈ ವೇಳೆ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದಿರುವ ಡಿ ಬಿ ಜೈನ್ ಕಂಪೆನಿಯ ಅಧಿಕಾರಿಗಳು ಭೇಟಿ ನೀಡಿ‌, ಸೋಮವಾರ ಅಂದರೆ ನಾಳೆ ಮಧ್ಯಾಹದೊಳಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿತ್ತು. ಜಿಲ್ಲಾಧಿಕಾರಿಯವರ ಸೂಚನೆ ಇದ್ದರೂ ಅದನ್ನು ಪಾಲಿಸದಿರುವುದಕ್ಕೆ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದರು.

Exit mobile version