Site icon Suddi Belthangady

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು( ಸ್ವಾಯತ್ತ) ನಲ್ಲಿ ಏಳು ದಿನದ ಯೋಗ ಶಿಬಿರಕ್ಕೆ ಚಾಲನೆ- ಆಧುನಿಕ ಜೀವನಶೈಲಿಗೆ ಯೋಗ ಅತ್ಯಗತ್ಯ: ಡಾ.ಶಿವಪ್ರಸಾದ್ ಶೆಟ್ಟಿ

ಉಜಿರೆ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು( ಸ್ವಾಯತ್ತ), ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸುತ್ತಿರುವ ” Yoga for Sound Mind in a Sound Body” ಎನ್ನುವ ಶೀರ್ಷಿಕೆಯಡಿಯಲ್ಲಿ ನಡೆಯಲಿರುವ ಒಂದು ವಾರದ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯೋಗ ವಿಭಾಗದ ಡೀನ್ ಮತ್ತು ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾಲಯ ಶಾಂತಿವನದ ಮುಖ್ಯ ಆರೋಗ್ಯಾಧಿಕಾರಿ ಡಾ.ಶಿವಪ್ರಸಾದ್ ಶೆಟ್ಟಿ ಮಾತನಾಡಿ “ಆಧುನಿಕ ಜೀವನ ಶೈಲಿಗೆ ಯುವ ಜನತೆ ಯೋಗವನ್ನು ಮೈಗೂಡಿಸುವುದು ಅಗತ್ಯವಾಗಿದೆ.ಯೋಗವು ಮಾನಸಿಕ, ಬೌದ್ಧಿಕ, ಶಾರೀರಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಜೀವನದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ನಮ್ಮ ಒತ್ತಡವನ್ನು ನಿಯಂತ್ರಿಸಲು ಯೋಗವು ಮಹತ್ವದ ಪಾತ್ರವನ್ನು ವಹಿಸುತ್ತದೆ.” ಎನ್ನುವುದರ ಜೊತೆಗೆ ಪ್ರಾಣಾಯಾಮ, ಧ್ಯಾನದ ಮಹತ್ವವನ್ನು ಸರಳವಾಗಿ ವಿವರಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಹಾವಿದ್ಯಾಲಯದ ಡಾ.ಕಾಡ ಗೌಡ ಪಾಟೇಲ ಇವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸವನ್ನು ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಸ್. ಡಿ.ಎಂ. ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ನ ಪೂರ್ವ ಯೋಜನಾಧಿಕಾರಿ ರಾಜು, ಕಾಲೇಜಿನ ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಪ್ರೊ.ದೀಪಾ ಆರ್. ಪಿ. , ಕಾಲೇಜಿನ ಉಪನ್ಯಾಸಕ ವೃಂದ , ಸ್ವಯಂಸೇವಕರು ಉಪಸ್ಥಿತರಿದ್ದರು.

ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಸ್ವಯಂಸೇವಕ ಸುದೇಶ್ ಗೌಡ ಕಾರ್ಯಕ್ರಮ ನಿರೂಪಿಸಿ, ರಾಮಕೃಷ್ಣ ಶರ್ಮ ಎನ್. ವಂದಿಸಿದರು.

Exit mobile version