Site icon Suddi Belthangady

ನಿಡ್ಲೆ: ಸರ್ಕಾರಿ ಪ್ರೌಢ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಯಕ್ಷನಾಟ್ಯ ತರಬೇತಿ ಉದ್ಘಾಟನೆ

ನಿಡ್ಲೆ: ಜೂನ್ 18ರಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷ ಶಿಕ್ಷಣ ಯೋಜನೆಯ ಅಡಿಯಲ್ಲಿ ನಿಡ್ಲೆ ಸರ್ಕಾರಿ ಪ್ರೌಢ ಶಾಲೆಯಲ್ಲಿ 2024-25ನೇ ಸಾಲಿನ ಯಕ್ಷನಾಟ್ಯ ತರಬೇತಿ ಉದ್ಘಾಟನೆಗೊಂಡಿತು.

ನಿವೃತ್ತ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮ ನಿಡ್ಲೆಯು ಯಕ್ಷಗಾನ ಕಲಾವಿದರ ಮತ್ತು ಕಲಾಸಕ್ತರ ಊರು ಇದನ್ನು ಮುಂದುವರಿಸಿಕೊಂಡು ಹೋಗಲು ವಿದ್ಯಾರ್ಥಿಗಳಿಗೆ ಸದವಕಾಶ ಎಂದು ಹೇಳುತ್ತಾ ಶುಭ ಕೋರಿದರು.

ಯಕ್ಷ ಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಇದರ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಇವರು ಪಟ್ಲ ಸತೀಶ್ ಶೆಟ್ಟಿ ನೇತೃತ್ವದ ಫೌಂಡೇಶನ್ ಮಾಡುತ್ತಿರುವ ಕಲಾ ಸೇವೆಯ ಮತ್ತು ಕಲಾ ಪೋಷಕ ಕೈಂಕರ್ಯಗಳ ಕುರಿತಾದ ಸಂಕ್ಷಿಪ್ತ ಮಾಹಿತಿಯನ್ನು ನೀಡಿ ಶುಭ ಹಾರೈಸಿದರು.

ಯಕ್ಷಗಾನ ಗುರುಗಳಾದ ಈಶ್ವರ ಪ್ರಸಾದ್ ಇವರು ಯಕ್ಷಗಾನವು ಉತ್ತಮ ಕಲೆಯಾಗಿದ್ದು ಶಿಕ್ಷಣದ ಜೊತೆ ಇಂತಹ ಕಲೆಯನ್ನು ಅಭ್ಯಾಸ ಮಾಡಿದರೆ ಒಳ್ಳೆಯದು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಮುಖ್ಯ ಶಿಕ್ಷಕರಾದ ಶಾಂತ ಶೆಟ್ಟಿ ಇವರು ಎರಡು ವರ್ಷಗಳಿಂದ ಪಟ್ಲ ಫೌಂಡೇಶನ್ ನ ಸಹಕಾರ ಸಿಗುತ್ತಿರುವುದು ಬಹಳ ಖುಷಿಯ ವಿಚಾರ ಎಂದು ತಿಳಿಸುತ್ತಾ ಸಿಕ್ಕಿದ ಸೌಭಾಗ್ಯವನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಳೆದ ವರ್ಷ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದ ಪಟ್ಲ ಭಾಗವತರನ್ನು ನೆನಪಿಸಿಕೊಂಡು ಧನ್ಯವಾದಗಳನ್ನು ಸಲ್ಲಿಸಿದರು.ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಪುರುಷೋತ್ತಮ ಗೌಡರು ಅಧ್ಯಕ್ಷತೆ ವಹಿಸಿ ಶುಭ ಕೋರಿದರು.ಟ್ರಸ್ಟ್ ನ ಬೆಳ್ತಂಗಡಿ ಘಟಕದ ಸಂಚಾಲಕ ಕಿರಣ್ ಶೆಟ್ಟಿ, ಕಾಯರ್ತಡ್ಕ ಪ್ರೌಢಶಾಲೆಯ ಶಿಕ್ಷಕ ವಿನಾಯಕ ಜೋಶಿ, ಛಾಯಾಗ್ರಾಹಕ ಗಂಗಾಧರ್, ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯಕ್ಷಗಾನ ಶೈಲಿಯಲ್ಲಿ ಶರತ್ ಕುಮಾರ್ ಪ್ರಾರ್ಥಿಸಿದರು.ಉಷಾ ರವರು ಸ್ವಾಗತಿಸಿ, ಸೌಮ್ಯ ರವರು ವಂದಿಸಿದ ಈ ಕಾರ್ಯಕ್ರಮವನ್ನು ಶೋಲಿ ಮೇಡಂ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನ ಗುರುಗಳು ವಿದ್ಯಾರ್ಥಿಗಳಿಗೆ ಪ್ರಾರಂಭಿಕ ನಾಟ್ಯ ತರಬೇತಿಯನ್ನು ಆರಂಭಿಸಿದರು.

Exit mobile version