Site icon Suddi Belthangady

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ, ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರದಲ್ಲಿ ನಡೆಯುತ್ತಿದ್ದು, ಜೂ.16ರಂದು ಕಿವಿ, ಮೂಗು, ಗಂಟಲು ಉಚಿತ ತಪಾಸಣಾ ಶಿಬಿರ ನಡೆಯಿತು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಶಿಬಿರ ಉದ್ಘಾಟಿಸಿ ಮಾತನಾಡಿ, ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯು ತಿಂಗಳಿಗೆ ಮೂರು ಅಥವಾ ನಾಲ್ಕು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತದೆ. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ತಿಂಗಳಿಗೆ 2 ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗುತ್ತದೆ. ಕನಿಷ್ಟ ಒಬ್ಬ ಎಂ.ಬಿ.ಬಿ.ಎಸ್ ವೈದ್ಯರು ಕೂಡ ಇಲ್ಲದ ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾದ ಜನತೆಗೆ ಅವರು ಇರುವ ಜಾಗದಲ್ಲಿಯೇ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ದೊರಕಿಸಿ ಕೊಡುವುದು ನಮ್ಮ ಗುರಿಯಾಗಿದೆ ಎಂದರು.

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ| ರೋಹನ್ ಎಂ. ದೀಕ್ಷಿತ್ ಮಾತನಾಡುತ್ತಾ, ಈ ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಇ.ಎನ್.ಟಿ ಸಂಬಂಧಿಸಿದ ಎಲ್ಲಾ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೇ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ಕೂಡ ಇಲ್ಲಿ ನಡೆಸಲಾಗಿದೆ ಎಂದರು.

ಶಿಬಿರದಲ್ಲಿ ಉಚಿತ ಹಿಯರಿಂಗ್ ಟೆಸ್ಟ್, ಮಕ್ಕಳು ಮತ್ತು ವಯಸ್ಕರಲ್ಲಿ ಮೂಗಿನ ದ್ರವದ ತಪಾಸಣೆ, ಅಲರ್ಜಿಗೆ ಚಿಕಿತ್ಸೆ, ಮೈಗ್ರೇನ್ ತಲೆನೋವಿಗೆ ಚಿಕಿತ್ಸೆ, ವೆರ‍್ಟಿಗೋ ಪರೀಕ್ಷೆ ಮತ್ತು ಚಿಕಿತ್ಸೆ, ಧ್ವನಿ ಬದಲಾವಣೆಗಳ ಪರೀಕ್ಷೆ ಮತ್ತು ಚಿಕಿತ್ಸೆ, ಕಿವುಡುತನದ ಪರೀಕ್ಷೆ ಮತ್ತು ಚಿಕಿತ್ಸೆ, ಥೈರಾಯಿಡ್ ಪರೀಕ್ಷೆ ಮತ್ತು ಚಿಕಿತ್ಸೆ, ಕಿವಿ-ಮೂಗು- ಗಂಟಲು ಕ್ಯಾನ್ಸರ್ ತಪಾಸಣೆ, ಗೊರಕೆಗೆ ಚಿಕಿತ್ಸೆ ಇತ್ಯಾದಿ ಇತ್ಯಾದಿ ಉಚಿತ ವೈದ್ಯಕೀಯ ಸೇವೆ ನೀಡಲಾಯಿತು.

ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ತಜ್ಞರಾಗಿರುವ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಿವಿ, ಮೂಗು, ಗಂಟಲು ತಜ್ಞ ಡಾ|ರೋಹನ್ ಎಂ.ದೀಕ್ಷಿತ್ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.

ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿರುತ್ತದೆ. ಒಳರೋಗಿ ವಿಭಾಗದಲ್ಲಿ 10%, ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ದೊರೆಯಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

143 ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡು ಸಂತೋಷ ವ್ಯಕ್ತಪಡಿಸಿದರು.

Exit mobile version