Site icon Suddi Belthangady

ಬೆಳ್ತಂಗಡಿ: ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ- ಮಕ್ಕಳ ಆರೋಗ್ಯದತ್ತ ಗಮನ ಹರಿಸಲು ಸೂಚನೆ

ಬೆಳ್ತಂಗಡಿ: ಬೆಳ್ತಂಗಡಿ ಪದವಿಪೂರ್ವ ಕಾಲೇಜು ಬಳಿ ಇರುವ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಭೇಟಿ ನೀಡಿ ವಸತಿ ನಿಲಯದ ಮೂಲಸೌಕರ್ಯ ಪರಿಶೀಲಿಸಿದರು.

ಕುಡಿಯುವ ನೀರು, ಅಡುಗೆಕೋಣೆ, ವಿಶ್ರಾಂತಿ ಕೊಠಡಿ, ಶೌಚಾಲಯ ವ್ಯವಸ್ಥೆಗಳನ್ನು ಪರಿಶೀಲಿಸಿ, ವಸತಿನಿಲಯದ ಮೇಲ್ವಿಚಾರಕರಿಂದ ಮಾಹಿತಿ ಪಡೆದರು. ಅಡುಗೆ ಕೋಣೆಯಲ್ಲಿ ಆಹಾರ ದಾಸ್ತಾನು ಡಬ್ಬಗಳನ್ನೂ ಪರಿಶೀಲಿಸಿದರು.

ಮಳೆಗಾಲದಲ್ಲಿ ಮಕ್ಕಳಿಗೆ ಬಿಸಿ ನೀರು ಕೊಡಬೇಕು, ಸಣ್ಣಪುಟ್ಟ ಅನಾರೋಗ್ಯ ಕಂಡು ಬಂದರೆ ತಕ್ಷಣ ಸ್ಥಳೀಯ ಅರೋಗ್ಯಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಬೇಕು. ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ಲೋಕಾಯುಕ್ತ ಅಧಿಕಾರಿಗಳು ನೀಡಿದರು.

ಆಹಾರ ವ್ಯವಸ್ಥೆ, ಇನ್ನಿತರ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳಿಂದಲೂ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಪಡೆದರು. ವಸತಿ ನಿಲಯದಲ್ಲಿ ಸಮಸ್ಯೆ ಬಂದರೆ ಲೋಕಾಯುಕ್ತಕ್ಕೆ ದೂರು ನೀಡಲು ತಿಳಿಸಿದರು.

ವಸತಿ ನಿಲಯದ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದ ಬಗ್ಗೆ ವಸತಿನಿಲಯದ ಕಲ್ಯಾಣಾಧಿಕಾರಿ ಜೋಸೆಫ್ ಮಾಹಿತಿ ನೀಡಿದರು. ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಂಪರ್ಕ ಪಡೆದು ಇಂತಹ ವಿದ್ಯಾರ್ಥಿಗಳಿಗೆ, ವಸತಿನಿಲಯದ ಸಿಬ್ಬಂದಿಯನ್ನು ಗುರುತಿಸಬೇಕು ಎಂದು ಸೂಚಿಸಿದರು.

ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಸ್ಥಳದ ಅಭಾವವಿದೆ. ಮಕ್ಕಳ ಸಂಖ್ಯೆ ಕಡಿಮೆ ಮಾಡಿದರೆ ಇರುವ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಇಲ್ಲಿ ದಾಖಲಾತಿ 125ಕ್ಕೆ ಅವಕಾಶ ಇದ್ದರು ಈಗ 110 ಮಕ್ಕಳನ್ನು ದಾಖಲಾತಿ ಮಾಡಲಾಗಿದೆ. ವಸತಿ ನಿಲಯದ ಸುತ್ತ ಸಿಸಿ ಕ್ಯಾಮಾರಾ ಅಳವಡಿಸಲಾಗಿದೆ. ರಾತ್ರಿ ಹೊತ್ತು ಸಿಬ್ಬಂದಿ ವಾಸ್ತವ್ಯ ಇದ್ದು, ಮಕ್ಕಳ ಸುರಕ್ಷತೆಗೆ ಗಮನ ಹರಿಸುತ್ತಿದ್ದಾರೆ ಎಂದು ವಸತಿ ನಿಲಯದ ಅಧಿಕಾರಿ ಜೋಸೆಫ್ ಮಾಹಿತಿ ನೀಡಿದರು.

Exit mobile version