Site icon Suddi Belthangady

ಉಜಿರೆ: ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆ

ಉಜಿರೆ: ದೈನಂದಿನ ಜೀವನದಲ್ಲಿ ಬರುವ ಒತ್ತಡಗಳನ್ನು ಸರಳ ವಿಧಾನಗಳ ಮೂಲಕ ನಿರ್ವಹಿಸಿಕೊಳ್ಳಬಹುದು. ಸದಾ ಸಂತೋಷದಿಂದ ಇರುವುದೇ ಒತ್ತಡಕ್ಕಿರುವ ದಿವ್ಯ ಔಷಧ ಎಂದು ಎಸ್ ಡಿ ಎಂ ಪದವಿ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ವಂದನಾ ಜೈನ್ ಅಭಿಪ್ರಾಯಪಟ್ಟರು.

ಅವರು ಜೂನ್ 11ರಂದು ಉಜಿರೆ ಧೀಮತಿ ಜೈನ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ‘ಒತ್ತಡ ನಿರ್ವಹಣೆ ಹಾಗೂ ಸಮತೋಲಿತ ಜೀವನ ಶೈಲಿ’ ಎಂಬ ವಿಚಾರದ ಕುರಿತಾಗಿ ಮಾತನಾಡುತ್ತಾ ಜೈನ ಧರ್ಮದ ಆಚರಣೆಗಳು, ವ್ರತ ನಿಯಮಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುವ ವಿಧಾನಗಳಿವೆ.

ಧ್ಯಾನ, ತಪ ಸ್ವಾಧ್ಯಾಯಗಳ ಮೂಲಕ ದೈನಂದಿನ ಒತ್ತಡಗಳನ್ನು ನಿರ್ವಹಿಸಬಹುದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರಜತಾ ಪಿ.ಶೆಟ್ಟಿ ಮಾತನಾಡಿ ಮನೆಗಳಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಹಿರಿಯರು ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ಕಿರಿಯರಲ್ಲೂ ಆಯಾ ಭಾವನೆ ಉಂಟಾಗುತ್ತದೆ, ಆಯಾ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಧೀಮತಿ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಸೋನಿಯಾ ಯಶೋವರ್ಮ ಕಾರ್ಯಕ್ರಮಕ್ಕೆ ಶುಭಕೋರಿದರು.ಕಾರ್ಯದರ್ಶಿ ದಿವ್ಯಾಕುಮಾರಿ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿ, ಕೋಶಾಧಿಕಾರಿ ಸ್ಮಿತಾ ಪ್ರಶಾಂತ್ ಆಯವ್ಯಯ ಮಂಡಿಸಿದರು.

ಪೂಜಿತವರ್ಮ ಸ್ವಾಗತಿಸಿ. ಶಶಿಪ್ರಭಾ ಧನ್ಯಕುಮಾರ್ ವಂದಿಸಿದರು.ಶಶಿಪ್ರಭಾ ಎಸ್ ಕಟಗೆ ಕಾರ್ಯಕ್ರಮ ನಿರ್ವಹಿಸಿದರು.

Exit mobile version