Site icon Suddi Belthangady

ಮೊದಲ 9 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಪತ್ಯಬಳಿಕದ 9 ಚುನಾವಣೆಯಲ್ಲಿಯೂ ಬಿಜೆಪಿಯದ್ದೇ ಹವಾ- ತಲಾ 4 ಬಾರಿ ಗೆದ್ದು ಇತಿಹಾಸ ಸೃಷ್ಠಿಸಿದ್ದ ಕಾಂಗ್ರೆಸ್‌ನ ಜನಾರ್ದನ ಪೂಜಾರಿ- ಬಿಜೆಪಿಯ ಧನಂಜಯ ಕುಮಾರ್

ಬೆಳ್ತಂಗಡಿ: ರಾಷ್ಟ್ರ ಕಂಡ 18 ಲೋಕಸಭಾ ಚುನಾವಣೆಯ ಪೈಕಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ೯ ಬಾರಿ ಗೆದ್ದು ಸಾಧನೆ ಮಾಡಿದೆ. ಮೊದಲ ಒಂಬತ್ತು ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೆಸ್ ಗೆದ್ದಿತ್ತು. ಅನಂತರದ ಎಲ್ಲಾ ೯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಮೊದಲ ಒಂಬತ್ತು ಲೋಕಸಭಾ ಚುನಾವಣೆಗಳ ಪೈಕಿ ೧೯೫೧ರಲ್ಲಿ ಬಿ. ಶಿವರಾವ್, ೧೯೫೭ರಲ್ಲಿ ಕೆ.ಆರ್. ಆಚಾರ್, ೧೯೬೨ರಲ್ಲಿ ಎ. ಶಂಕರ ಆಳ್ವ, ೧೯೬೭ರಲ್ಲಿ ಸಿ.ಎಂ. ಪೂಣಚ್ಚ, ೧೯೭೧ರಲ್ಲಿ ಕೆ.ಕೆ. ಶೆಟ್ಟಿ, ೧೯೭೭ರಲ್ಲಿ ಬಿ. ಜನಾರ್ದನ ಪೂಜಾರಿ, ೧೯೮೦ರಲ್ಲಿ ಬಿ. ಜನಾರ್ದನ ಪೂಜಾರಿ, ೧೯೮೪ರಲ್ಲಿ ಬಿ. ಜನಾರ್ದನ ಪೂಜಾರಿ, ೧೯೮೯ರಲ್ಲಿ ಬಿ ಜನಾರ್ದನ ಪೂಜಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಬಳಿಕದ ಎಲ್ಲಾ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ತಾವರೆ ಅರಳಿದೆ. ೧೯೯೧ರಲ್ಲಿ ವಿ. ಧನಂಜಯ ಕುಮಾರ್, ೧೯೯೬ರಲ್ಲಿ ವಿ. ಧನಂಜಯ ಕುಮಾರ್, ೧೯೯೮ರಲ್ಲಿ ವಿ. ಧನಂಜಯ ಕುಮಾರ್, ೧೯೯೯ರಲ್ಲಿ ವಿ. ಧನಂಜಯ ಕುಮಾರ್, ೨೦೦೪ರಲ್ಲಿ ಡಿ.ವಿ. ಸದಾನಂದ ಗೌಡ, ೨೦೦೯ರಲ್ಲಿ ನಳಿನ್ ಕುಮಾರ್ ಕಟೀಲ್, ೨೦೧೪ರಲ್ಲಿ ನಳಿನ್ ಕುಮಾರ್ ಕಟೀಲ್, ೨೦೧೯ರಲ್ಲಿ ನಳಿನ್ ಕುಮಾರ್ ಕಟೀಲ್ ಜಯ ಸಾಧಿಸಿದ್ದಾರೆ. ೨೦೨೪ರ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವು ಸಾಧಿಸಿದ್ದಾರೆ.
ಸತತ ೪ ಬಾರಿ ಗೆದ್ದು ಬೀಗಿದ ಜನಾರ್ದನ ಪೂಜಾರಿ, ಧನಂಜಯ ಕುಮಾರ್: ೧೯೭೭ರ ಚುನಾವಣೆ ವೇಳೆಗೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿತ್ತು. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ವಿರುದ್ಧ ಜನತೆಗೆ ಆಕ್ರೋಶವಿತ್ತು. ಮಂಗಳೂರು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆಯಾಗಿತ್ತು. ಈ ಬಾರಿ ಕಾಂಗ್ರೆಸ್ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲು ಯೋಚಿಸಿತ್ತು. ೪೦ ಹರೆಯದ ಯುವ ನ್ಯಾಯವಾದಿ ಮಂಗಳೂರಿನ ಬಿ.ಜನಾರ್ದನ ಪೂಜಾರಿ ಅವರಿಗೆ ಕಾಂಗ್ರೆಸ್ ಮಣೆ ಹಾಕಿತ್ತು. ಕಾಂಗ್ರೆಸ್ ವಿರುದ್ಧ ಸಮರಕ್ಕೆ ರಾಷ್ಟ್ರ ಮಟ್ಟದಲ್ಲಿ ೪ ಪಕ್ಷಗಳು ಒಗ್ಗೂಡಿ ಜನತಾ ಪಾರ್ಟಿ (ಭಾರತೀಯ ಲೋಕ ದಳ) ರಚನೆಯಾಗಿತ್ತು. ಕೊಡಗಿನ ನ್ಯಾಯವಾದಿ ಎ.ಕೆ. ಸುಬ್ಬಯ್ಯ ನೇಗಿಲು ಹೊತ್ತ ರೈತನ ಚಿಹ್ನೆಯಡಿ ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಇಬ್ಬರು ನ್ಯಾಯವಾದಿಗಳ ಮಧ್ಯೆ ನೇರ ಸ್ಪರ್ಧೆ ನಡೆದಿತ್ತು. ಚುನಾವಣೆ ಫಲಿತಾಂಶ ಬಂದಾಗ ದೇಶದಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಉಂಟಾಗಿತ್ತು. ಆದರೆ ಕರ್ನಾಟಕದಲ್ಲಿ ಮಂಗಳೂರು ಸೇರಿದಂತೆ ೨೬ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು. ಮಂಗಳೂರು ಕ್ಷೇತ್ರದಲ್ಲಿ ೭೮ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ಪೂಜಾರಿ ಅವರು ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ೧೯೮೦ರ ಚುನಾವಣೆಯಲ್ಲಿ ಕಾಂಗ್ರೆಸ್ ಇಬ್ಬಾಗವಾದ ಪರಿಣಾಮ ಹಸು ಕರು ಚಿಹ್ನೆ ಮಾಯವಾಗಿ ಕಾಂಗ್ರೆಸ್‌ಗೆ ಕೈ ಚಿಹ್ನೆ ಬಂದಿತ್ತು. ಪ್ರಥಮ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಮಾಡದೆ ಪೂಜಾರಿ ಅವರನ್ನೇ ಮತ್ತೆ ಕಣಕ್ಕಿಳಿಸಿತು. ಜನತಾ ಪಾರ್ಟಿಯಿಂದ ಕರಂಬಳ್ಳಿ ಸಂಜೀವ ಶೆಟ್ಟಿ, ಅರಸು ಕಾಂಗ್ರೆಸ್‌ನಿಂದ ಬಿ.ಎ. ಮೊಯಿದ್ದೀನ್ ಅಖಾಡಕ್ಕಿಳಿದ್ದರು. ಐವರು ಪಕ್ಷೇತರರು ಸಹಿತ ಒಟ್ಟು ೯ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಮತದಾರ ಪೂಜಾರಿ ಅವರ ಕೈ ಬಿಡಲಿಲ್ಲ. ೧.೨೮ ಲಕ್ಷ ಮತಗಳ ದಾಖಲೆ ಅಂತರದ ಜಯ ಪೂಜಾರಿಗೆ ದೊರೆಯಿತು. ಪ್ರಧಾನಿ ಇಂದಿರಾ ಗಾಂಧಿ ಅಪ್ತ ವಲಯದಲ್ಲಿ ಗುರುತಿಸಿಕೊಂಡ ಜನಾರ್ದನ ಪೂಜಾರಿ ಕೇಂದ್ರ ಸಹಾಯಕ ವಿತ್ತ ಸಚಿವರಾಗಿ ಸಾಲಮೇಳದ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಿದರು. ೮೪ರ ಚುನಾವಣೆಯ ವೇಳೆ ಜನತಾ ಪಾರ್ಟಿ ವಿಭಜನೆಯಾಗಿ ಬಿಜೆಪಿ ಉದಯವಾಗಿತ್ತು. ಪುತ್ತೂರಿನ ಆಗಿನ ಶಾಸಕ ಕೆ. ಉರಿಮಜಲು ರಾಮ ಭಟ್ ಬಿಜೆಪಿ ಅಭ್ಯರ್ಥಿಯಾದರು. ಕಣದಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ಇದ್ದರು. ತ್ರಿಕೋನ ಸ್ಪರ್ಧೆಯಲ್ಲಿ ಪೂಜಾರಿ ಅವರ ವಿಜಯಯಾತ್ರೆ ಮುಂದುವರಿಯಿತು. ೧.೧೯ ಲಕ್ಷ ಮತಗಳ ಅಂತರದಿಂದ ಪೂಜಾರಿ ಗೆದ್ದು ಪ್ರಧಾನಮಂತ್ರಿ ರಾಜೀವ್ ಗಾಂಧಿ ಸರ್ಕಾರದಲ್ಲೂ ಸಚಿವರಾದರು. ೧೯೮೯ರ ಚುನಾವಣೆಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ ಬಿಜೆಪಿ ಮಂಗಳೂರಿನ ಮಾಜಿ ಶಾಸಕರಾದ ಬೆಳ್ತಂಗಡಿ ತಾಲೂಕಿನ ವೇಣೂರಿನ ಜೈನಮನೆತನದವರಾದ ವಕೀಲ ವಿ. ಧನಂಜಯ ಕುಮಾರ್‌ಗೆ ಟಿಕೆಟ್ ನೀಡಿತು. ಜನತಾದಳದಿಂದ ಎಂ. ಮಹಮ್ಮದ್ ಹುಸೇನ್ ಕಣದಲ್ಲಿದ್ದರು. ಆದರೆ ಪೂಜಾರಿ ಅವರ ಅವರ ಗೆಲುವಿನ ನಾಗಾಲೋಟ ತಡೆಯಲು ಸಾಧ್ಯವಾಗಲಿಲ್ಲ. ೯೧ ಸಾವಿರ ಮತಗಳ ಅಂತರದಿಂದ ಗೆದ್ದು ೪ನೇ ಬಾರಿ ಸಂಸತ್ ಪ್ರವೇಶಿಸಿದರು. ೧೯೫೧ರಿಂದ ೧೯೯೧ರವರೆಗೆ ನಾಲ್ಕು ದಶಕಗಳ ಕಾಲ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಧಿಪತ್ಯ ಇತ್ತು. ಸತತ ಚುನಾವಣೆಗಳನ್ನು ಕಾಂಗ್ರೆಸ್ ಗೆದ್ದಿತ್ತು. ಇತರ ಪಕ್ಷಗಳು ಜಯದ ಹತ್ತಿರವೂ ಸುಳಿದಿರಲಿಲ್ಲ. ಆದರೆ ೧೯೯೧ರ ಚುನಾವಣೆಯಲ್ಲಿ ಕರಾವಳಿಯ ರಾಜಕೀಯ ಚಿತ್ರಣವೇ ಬದಲಾಯಿತು. ೧೯೯೧ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಧನಂಜಯ ಕುಮಾರ್‌ರನ್ನು ಕಣಕ್ಕಿಳಿಸಿತು. ರಾಮ ಮಂದಿರ ಹೋರಾಟದ ಶಕ್ತಿಯಿಂದ ಬಿಜೆಪಿ ಪ್ರಬಲ ಹೋರಾಟ ನೀಡುವ ಸೂಚನೆ ನೀಡಿತ್ತು. ಚುನಾವಣೆ ಪ್ರಚಾರದ ಸಂದರ್ಭದಲ್ಲೇ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಯಿತು. ಕಾಂಗ್ರೆಸ್ ಪರ ಅನುಕಂಪದ ಅಲೆ ನಿರೀಕ್ಷಿಸಲಾಗಿತ್ತು. ಸಿಪಿಎಂ, ಜನತಾ ಪಾರ್ಟಿ ಸೇರಿದಂತೆ ಒಟ್ಟು ೮ ಅಭ್ಯರ್ಥಿಗಳಿದ್ದರು. ಫಲಿತಾಂಶ ಘೋಷಣೆಯಾದಾಗ ಎಲ್ಲ ರಾಜಕೀಯ ಲೆಕ್ಕಾಚಾರ ತಲೆಕೆಳಗಾಯಿತು. ನಾಲ್ಕು ಬಾರಿ ಗೆದ್ದ ಪೂಜಾರಿ ಅವರನ್ನು ೩೫ ಸಾವಿರ ಮತಗಳ ಅಂತರದಿಂದ ಧನಂಜಯ ಕುಮಾರ್ ಸೋಲಿಸುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿತು. ಧನಂಜಯ ಕುಮಾರ್ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.
ನಿರ್ಣಾಯಕವಾದರು ದಳದ ಜೀವಿಜಯ: ೧೯೯೬ರ ಚುನಾವಣೆಯಲ್ಲಿ ಮತ್ತೆ ಧನಂಜಯ ಕುಮಾರ್ ಮತ್ತು ಜನಾರ್ದನ ಪೂಜಾರಿ ಮುಖಾಮುಖಿಯಾದರು. ಜನತಾದಳದಿಂದ ಕೊಡಗಿನ ಪ್ರಭಾವಿ ನಾಯಕ ಜೀವಿಜಯ ಕಣಕ್ಕಿಳಿದಿದ್ದರು. ಜತೆಗೆ ೯ ಮಂದಿ ಪಕ್ಷೇತರರು ಕಣದಲ್ಲಿದ್ದರು. ಈ ಚುನಾವಣೆಯಲ್ಲಿ ಜನತಾದಳ ನಿರ್ಣಾಯಕ ಪಾತ್ರ ವಹಿಸಿತು. ಜೀವಿಜಯ ೧.೮೦ ಲಕ್ಷ ಮತ ಗಳಿಸಿದರು. ಕಾಂಗ್ರೆಸ್‌ಗೆ ೧೪ ಸಾವಿರ ಮಂತಗಳ ಅಂತರದ ಸೋಲಾಗಿತ್ತು. ಧನಂಜಯರಿಗೆ ಸತತ ೨ನೇ ಜಯ ದೊರಕಿತ್ತು. ೧೩ ದಿನದ ವಾಜಪೇಯಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಅವಕಾಶವೂ ಧನಂಜಯರಿಗೆ ದೊರೆಯಿತು. ಎರಡೇ ವರ್ಷದಲ್ಲಿ ಮತ್ತೆ (೧೯೯೮) ಚುನಾವಣೆ ನಡೆಯಿತು. ಒಟ್ಟು ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಜನಾರ್ದನ ಪೂಜಾರಿ ಪ್ರಬಲ ಸ್ಪರ್ಧೆ ನೀಡಿದರೂ ವಾಜಪೇಯಿ ಪರ ಅಲೆಯಿಂದ ಧನಂಜಯರು ಹ್ಯಾಟ್ರಿಕ್ ಜಯ ಸಾಧಿಸಿದರು. ೧೯೯೯ರ ಚುನಾವಣೆಯಲ್ಲಿ ಬಿಜೆಪಿಯ ವಿ. ಧನಂಜಯ ಕುಮಾರ್ ೩೩೪೧೫ ಮತಗಳ ಅಂತರದಲ್ಲಿ ಗೆದ್ದು ನಾಲ್ಕನೇ ಸಲ ಲೋಕಸಭೆ ಪ್ರವೇಶಿಸಿದರು.
ಕಳಚಿತು ಕೊಡಗು: ಹಿಂದಿನ ಮಂಗಳೂರು ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ವಿಟ್ಲ, ಉಳ್ಳಾಲ, ಮಂಗಳೂರು ವಿಧಾನಸಭಾ ಕ್ಷೇತ್ರಗಳಿದ್ದವು. ದ.ಕ.ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಹಾಗೂ ಸುರತ್ಕಲ್, ಬಂಟ್ವಾಳ ಮತ್ತು ಮೂಡುಬಿದಿರೆ ಉಡುಪಿ ಕ್ಷೇತ್ರಕ್ಕೆ ಸೇರಿದ್ದವು. ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರವೂ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿತ್ತು. ಪುನರ್ ವಿಂಗಡಣೆಯಲ್ಲಿ ಕೊಡಗು ಜಿಲ್ಲೆ ಸಂಪೂರ್ಣ ಕಳಚಿಕೊಂಡು ಮೈಸೂರು ಕ್ಷೇತ್ರಕ್ಕೆ ಸೇರ್ಪಡೆಯಾಯಿತು. ದ.ಕ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ದಕ್ಷಿಣ ಕನ್ನಡದ ಒಂದೇ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಂದವು. ೧೯೫೭ರ ಚುನಾವಣೆಯಲ್ಲಿ ಕೊಡಗು ಜಿಲ್ಲೆ ಒಳಗೊಂಡ ಮಂಗಳೂರು ಕ್ಷೇತ್ರ ಉದಯವಾಯಿತು. ಮಂಗಳೂರು ಕ್ಷೇತ್ರಕ್ಕೆ ನಡೆದ ಪಥಮ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕಾಂಗ್ರೆಸ್ ಕಟ್ಟಾಳು ಕೆ. ರಾಮಚಂದ್ರ ಆಚಾರ್ಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ೧೪೩೫೯೯ ಮತ ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದ್ದರು. ಮಂಗಳೂರು ಕ್ಷೇತ್ರದ ಪ್ರಥಮ ಸಂಸದರಾದರು. ಸಿಪಿಐ ಅಭ್ಯರ್ಥಿ ಕೃಷ್ಣ ಶೆಟ್ಟಿ ಎ. ೮೫೩೭೩ ಮತ ಪಡೆದರು. ೧೯೬೨ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೆ.ಆರ್. ಆಚಾರ್ ಬದಲು ನ್ಯಾಯವಾದಿ ಎ. ಶಂಕರ ಅಳ್ವರನ್ನು ಕಣಕ್ಕಿಳಿಸಿತು. ಸ್ವತಂತ್ರ, ಸಿಪಿಐ, ಜನಸಂಘ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು. ಕಾಂಗ್ರೆಸ್ ಮತ್ತೆ ಜಯ ಸಾಧಿಸಿತು. ಈ ಚುನಾವಣೆಯಲ್ಲಿ ಪರಾಭವಗೊಂಡ ಸಿಪಿಐನ ಬಿ.ವಿ. ಕಕ್ಕಿಲಾಯರು ಬಳಿಕ ಬಂಟ್ವಾಳ ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರು. ಸ್ವತಂತ್ರ ಪಕ್ಷದ ಜೆ.ಎಂ. ಲೋಬೊ ಪ್ರಭು ಉಡುಪಿ ಕ್ಷೇತ್ರದ ಸಂಸದರಾಗಿ ಚುನಾಯಿತರಾದರು. ಮೈಸೂರು ರಾಜ್ಯದಲ್ಲಿ ೧೯೬೭ರ ಚುನಾವಣೆ ವೇಳೆಗೆ ೨೭ ಕ್ಷೇತ್ರಗಳಿದ್ದವು. ಕೊಡಗು ಜಿಲ್ಲೆ ಪೂರ್ತಿಯಾಗಿ ಮಂಗಳೂರು ಕ್ಷೇತ್ರದಲ್ಲಿತ್ತು. ಮೊದಲ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಿತ್ತು. ೧೯೬೭ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಥಮ ಬಾರಿಗೆ ಕೊಡಗಿನ ಸಿ.ಎಂ. ಪೂಣಚ್ಚರನ್ನು ಕಣಕ್ಕಿಳಿತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಿ.ಎಂ. ಪೂಣಚ್ಚ ಕಾಂಗ್ರೆಸ್ ಕಟ್ಟಾಳು ಆಗಿದ್ದರು. ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಡಿಯಾ ಚಳುವಳಿಯಲ್ಲಿ ಜೈಲು ವಾಸ ಅನುಭವಿಸಿದ್ದರು. ೧೯೪೭ರಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಕೊಡಗು ರಾಜ್ಯದ ವಿಧಾನಸಭೆ ನಡೆದ ಪ್ರಥಮ ಚುನಾವಣೆಯಲ್ಲಿ ಗೆದ್ದ ಪೂಣಚ್ಚ ೧೯೫೨ರಿಂದ ೫೬ರವರಗೆ ಕೊಡಗಿನ ಮುಖ್ಯಮಂತ್ರಿಯಾಗಿದ್ದರು. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಮೈಸೂರು ರಾಜ್ಯದಲ್ಲಿ ಕೊಡಗು ವಿಲೀನವಾಯಿತು. ೧೯೬೭ರ ಚುನಾವಣೆಯಲ್ಲಿ ಪೂಣಚ್ಚರಿಗೆ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ದೊರೆಯಿತು. ಮೂವರು ಪಕ್ಷೇತರರು ಸೇರಿದಂತೆ ಐದು ಮಂದಿ ಕಣದಲ್ಲಿದ್ದರು. ಕೊಡಗಿನ ಮಾಜಿ ಮುಖ್ಯಮಂತ್ರಿ ಪೂಣಚ್ಚ ಅವರು ೧.೨೫ ಲಕ್ಷ ಮತ ಗಳಿಸಿ ಮಂಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.

ಹ್ಯಾಟ್ರಿಕ್ ಜಯ ಸಾಧಿಸಿದ ನಳಿನ್ ಕುಮಾರ್: ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ ಅವರು ಸತತವಾಗಿ ನಾಲ್ಕು ಬಾರಿ ಸಂಸದರಾಗಿ ಚುನಾಯಿತರಾದವರು. ಬಳಿಕದ ಚುನಾವಣೆಯಲ್ಲಿ ಪರಾಜಿತರಾದರು. ಬಿಜೆಪಿಯ ವಿ. ಧನಂಜಯ ಕುಮಾರ್ ಅವರೂ ಸತತವಾಗಿ ನಾಲ್ಕು ಬಾರಿ ಸಂಸದರಾದವರು. ಆದರೆ ಬಳಿಕ ಪಕ್ಷದಿಂದ ಟಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಡಿ.ವಿ. ಸದಾನಂದ ಗೌಡ ಅವರು ಒಂದು ಬಾರಿ ಸಂಸದರಾದರು. ನಂತರದ ಚುನಾವಣೆಯಲ್ಲಿ ಅವರು ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿದರು. ಅನಿರೀಕ್ಷಿತವಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಪಡೆದ ನಳಿನ್ ಕುಮಾರ್ ಕಟೀಲ್ ಅವರು ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಗರಿಮೆ ಹೊಂದಿದ್ದಾರೆ. ೨೦೦೯ರ ಚುನಾವಣೆಯಲ್ಲಿ ಸ್ಪರ್ಧಿಸಿದ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ ವಿರುದ್ಧ ೪೦೪೨೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
೨೦೧೪ರಲ್ಲಿ ಮತ್ತೆ ಗೆಲುವು ಸಾಧಿಸಿದ ನಳಿನ್ ಕುಮಾರ್ ಕಟೀಲ್ ೧,೪೩,೭೦೪ ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಬಿ. ಜನಾರ್ದನ ಪೂಜಾರಿ ಅವರನ್ನು ಸೋಲಿಸಿ ಎರಡನೇ ಬಾರಿ ಲೋಕಸಭೆ ಪ್ರವೇಶಿಸಿದರು. ೨೦೧೯ರಲ್ಲಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್‌ನ ಮಿಥುನ್ ರೈ ವಿರುದ್ಧ ೨, ೭೪,೬೨೧ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರು. ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ಜನಾರ್ದನ ಪೂಜಾರಿ ಮತ್ತು ಧನಂಜಯ ಕುಮಾರ್ ಅವರ ಹಾಗೆ ನಾಲ್ಕನೇ ಬಾರಿ ಗೆಲ್ಲುವ ಅವಕಾಶವನ್ನು ನಳಿನ್ ಕುಮಾರ್ ಕಳೆದುಕೊಂಡರು. ಬಿಜೆಪಿಯ ರಾಜ್ಯ ಕಾರ್ಯದರ್ಶಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಪಕ್ಷ ಮಣೆ ಹಾಕಿದಾಗ ಪಕ್ಷದ ಶಿಸ್ತಿನ ಸಿಪಾಯಿಯಂತೆ ನಳಿನ್ ಕುಮಾರ್ ಕಾರ್ಯ ನಿರ್ವಹಿಸಿದರು.

Exit mobile version