Site icon Suddi Belthangady

ಲೋಕಸಭಾ ಚುನಾವಣೆ: ದ.ಕ. ಕ್ಷೇತ್ರದಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ- 1,49,208- ಮತಗಳ ಅಂತರದಲ್ಲಿ ಕಾಂಗ್ರೆಸ್ ಸೋಲಿಸಿದ ಬ್ರಿಜೇಶ್ ಚೌಟ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಬ್ರಿಜೇಶ್ ಚೌಟ ಭರ್ಜರಿ ಜಯ ಸಾಧಿಸಿದ್ದಾರೆ. ತನ್ನ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿಯವರನ್ನು ೧,೪೯,೨೦೮ ಮತಗಳ ಅಂತರದಲ್ಲಿ ಪರಾಭವಗೊಳಿಸಿರುವ ಬ್ರಿಜೇಶ್ ಚೌಟರವರು ಪ್ರಥಮ ಪ್ರಯತ್ನದಲ್ಲಿಯೇ ಸಂಸತ್ ಪ್ರವೇಶಿಸಿದ್ದಾರೆ. ದಕ್ಷಿಣ ಕನ್ನಡದ ೧೮ನೇ ಸಂಸದರಾಗಿ ಚುನಾಯಿತರಾಗಿರುವ ರಾಜ್ಯ ಬಿಜೆಪಿಯ ಕಾರ್ಯದರ್ಶಿ, ಮಂಗಳೂರು ಕಂಬಳದ ರೂವಾರಿ, ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ೪೨ರ ಹರೆಯದ ಬ್ರಿಜೇಶ್ ಚೌಟ ಅವರು ಈ ಹಿಂದೆ ಇಲ್ಲಿ ಸಂಸದರಾಗಿದ್ದ ಕಾಂಗ್ರೆಸ್‌ನ ಬಿ. ಶಿವರಾವ್, ಕೆ.ಆರ್. ಆಚಾರ್, ಎ. ಶಂಕರ ಆಳ್ವ, ಸಿ.ಎಂ. ಪೂಣಚ್ಚ, ಕೆ.ಕೆ. ಶೆಟ್ಟಿ, ಬಿ. ಜನಾರ್ದನ ಪೂಜಾರಿ, ಬಿಜೆಪಿಯ ವಿ. ಧನಂಜಯ ಕುಮಾರ್, ಡಿ.ವಿ. ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಸಾಲಿಗೆ ಸೇರಿದ್ದಾರೆ. ಇದುವರೆಗೆ ರಾಷ್ಟ್ರ ಕಂಡ ೧೭ ಲೋಕಸಭಾ ಚುನಾವಣೆಯ ಪೈಕಿ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ೯ ಬಾರಿ ಮತ್ತು ಬಿಜೆಪಿ ೮ ಸಲ ಗೆದ್ದಿತ್ತು. ೧೮ನೇ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಸಮಬಲ ಸಾಧಿಸಿದೆ. ವಿಜಯಮಾಲೆ ಧರಿಸಿದ ಬಳಿಕ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದ ಬ್ರಿಜೇಶ್ ಚೌಟರವರು ಮತ ಎಣಿಕಾ ಕೇಂದ್ರದಿಂದ ನಗುಮೊಗದೊಂದಿಗೆ ಹೊರ ಬಂದಾಗ ಭಾರೀ ಜಯಘೋಷದೊಂದಿಗೆ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಮತ್ತು ಕಾರ್ಯಕರ್ತರು ಬ್ರಿಜೇಶ್ ಚೌಟರವರನ್ನು ಸಂಭ್ರಮದಿಂದ ಬರ ಮಾಡಿಕೊಂಡು ಹರ್ಷಾಚರಿಸಿದರು. ಬಳಿಕ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಪಕ್ಷದ ಕಚೇರಿ ಸಹಿತ ವಿವಿದೆಡೆಗೆ ಭೇಟಿ ನೀಡಿ ಹರ್ಷಾಚರಣೆಯಲ್ಲಿ ಭಾಗಿಯಾದರು.
ಗೆಲುವಿನ ನಗೆ ಬೀರಿದ ಬ್ರಿಜೇಶ್ ಚೌಟ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಮತ್ತು ಮೂಡಬಿದ್ರೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಎಪ್ರಿಲ್ ೨೬ರಂದು ನಡೆದ ಚುನಾವಣೆಯ ಮತ ಎಣಿಕೆ ಜೂನ್ ೪ರಂದು ಮಂಗಳೂರು ಸುರತ್ಕಲ್‌ನಲ್ಲಿರುವ ಎನ್‌ಐಟಿಕೆಯಲ್ಲಿ ನಡೆಯಿತು. ದ.ಕ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ನೇತೃತ್ವದಲ್ಲಿ ಅಭೂತಪೂರ್ವ ಭದ್ರತೆಯೊಂದಿಗೆ ಮತ ಎಣಿಕೆ ಜರಗಿತು. ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದ ಮತ ಯಂತ್ರಗಳನ್ನು ಬೆಳಿಗ್ಗೆ ೬ರಿಂದ ೭ರ ಅವಧಿಯಲ್ಲಿ ತೆರೆಯಲಾಯಿತು. ಆರಂಭದಲ್ಲಿ ೮ರಿಂದ ಅಂಚೆ ಮತಗಳ ಎಣಿಕೆ ನಡೆಯಿತು. ೮.೩೦ರಿಂದ ಇವಿಎಂ ಮತ ಎಣಿಕೆ ಆರಂಭಗೊಂಡಿತು. ಮತ ಎಣಿಕೆಯ ಆರಂಭದಿಂದ ಕೊನೇಯ ಹಂತದವರೆಗೂ ಮುನ್ನಡೆ ಸಾಧಿಸಿದ ಬ್ರಿಜೇಶ್ ಚೌಟ ಅವರು ಗೆಲುವಿನ ನಗೆ ಬೀರಿದರು.
೧೧೨ ಟೇಬಲ್‌ಗಳಲ್ಲಿ ಮತ ಎಣಿಕೆ: ಮತ ಎಣಿಕ ಕೇಂದ್ರದ ಪರಿಧಿಯಲ್ಲಿ ೧೦೦ ಮೀಟರ್ ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶ ಇರಲಿಲ್ಲ. ಈ ವಲಯವನ್ನು ಪಾದಚಾರಿ ವಲಯ ಎಂದು ಘೋಷಿಸಲಾಗಿತ್ತು. ಮತ ಎಣಿಕೆ ಕೇಂದ್ರದ ಸುತ್ತ ಹಾಗೂ ಎಣಿಕೆ ಕೇಂದ್ರದ ಕೊಠಡಿಯೊಳಗೆ ಸಿಸಿಟಿವಿ ಕಣ್ಗಾವಲಿತ್ತು. ಪ್ರತಿ ಎಣಿಕೆ ಮೇಜಿನ ಸಿಬಂದಿ ಮತ್ತು ಏಜೆಂಟರ ಮಧ್ಯೆ ಸ್ಟೀಲ್ ಪ್ರೇಮ್ ಜಾಲರಿ ಅಳವಡಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾ ಏಜೆಂಟರು ಬೆಳಗ್ಗೆ ೬ರಿಂದ ೭ ಗಂಟೆಯೊಳಗೆ ಪ್ರವೇಶಿಸಬೇಕಿತ್ತು. ಇವಿಎಂಗಳ ಮತ ಎಣಿಕೆ ಪ್ರತಿ ವಿಧಾನಸಭಾ ಕ್ಷೇತ್ರವಾರು ಎಂಟು ಕೊಠಡಿಗಳಲ್ಲಿ ತಲಾ ೧೪ ಟೇಬಲ್‌ಗಳಂತೆ ಒಟ್ಟು ೧೧೨ ಟೇಬಲ್‌ಗಳಲ್ಲಿ ನಡೆಯಿತು. ಅಂಚೆ ಮತಪತ್ರಗಳ ಎಣಿಕೆಗೆ ಪ್ರತ್ಯೇಕ ಕೊಠಡಿ ಹಾಗೂ ೨೦ ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ ಮತ ಎಣಿಕೆಗಾಗಿ ಚುನಾವಣಾಧಿಕಾರಿ ಹೊರತುಪಡಿಸಿ ೮ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಇವಿಎಂ ಮತ್ತು ಅಂಚೆ ಮತ ಪತ್ರ ಸೇರಿದಂತೆ ಎಣಿಕೆ ಕೇಂದ್ರದಲ್ಲಿ ಒಟ್ಟು ೫೫೪ ಸಿಬಂದಿ ಕಾರ್ಯ ನಿರ್ವಹಿಸಿದ್ದರು. ಮತ ಎಣಿಕಾ ಕೇಂದ್ರದ ಒಳಗೆ ಪ್ರವೇಶಿಸಲು ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯಲ್ಲಿ ೧೪,೦೯,೬೫೩ ಮತ ಚಲಾವಣೆಯಾಗಿತ್ತು: ದ.ಕ. ಜಿಲ್ಲೆಯಲ್ಲಿ ಇವಿಎಂಗಳಲ್ಲಿ ೧೪,೦೯,೬೫೩ ಮತಗಳು ಚಲಾವಣೆಯಾಗಿದ್ದು (ಶೇ ೭೭.೫೬), ಮನೆಯಿಂದಲೇ ಮತದಾನ, ಸೇವಾ ಮತದಾರರು, ತುರ್ತು ಸೇವೆಯಲ್ಲಿರುವವರು ಸೇರಿದಂತೆ ಮತ ಪತ್ರಗಳ ಮೂಲಕ ೮,೫೩೭ ಮತ ಚಲಾವಣೆಯಾಗಿದೆ. ಸೇವಾ ಮತದಾರರಿಗೆ ಒಟ್ಟು ೫೩೬ ಮತಪತ್ರಗಳನ್ನು ಕಳುಹಿಸಲಾಗಿತ್ತು. ೨೩೧ ಮತಪತ್ರಗಳು ಸ್ವೀಕೃತವಾಗಿದ್ದು ಮತ ಎಣಿಕೆ ಆರಂಭಕ್ಕಿಂತ ಒಂದು ಗಂಟೆ ಮುಂಚಿತವಾಗಿ ಸೇವಾ ಮತದಾರರ ಮತಪತ್ರಗಳನ್ನು ಸ್ವೀಕರಿಸಲಾಗಿತ್ತು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಮಾಹಿತಿ ಪಡೆಯಲು ಜೂ. ೧ರಿಂದ ನಿಯಂತ್ರಣ ಕೊಠಡಿ ತೆರೆಯಲಾಗಿತ್ತು. ಸಾರ್ವಜನಿಕರು ಈ ಸಂಬಂಧ ೧೯೫೦ ಸಹಾಯವಾಣಿಯನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿತ್ತು.
ಹಲವು ಸಾಮಾಗ್ರಿ ನಿಷೇಧ: ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಕ್ಯಾಲ್ಕುಲೇಟರ್, ಕತ್ತರಿ, ಚೂರಿ, ಲೈಟರ್, ಬೆಂಕಿ ಪೊಟ್ಟಣ, ಇಲೆಕ್ಟ್ರಾನಿಕ್ ವಸ್ತುಗಳು, ಶಸ್ತ್ರಾಸ್ತ್ರ,  ಸ್ಫೋಟಕಗಳು ನಿಷೇಧಿಸಲ್ಪಟ್ಟಿತ್ತು. ಅಭ್ಯರ್ಥಿಗಳು ಅಥವಾ ಏಜೆಂಟರು ಕೇವಲ ಪೆನ್, ಹಾಳೆ, ನೋಟ್ ಪ್ಯಾಡ್ ಹಾಗೂ ೧೭ ಸಿ ಫಾರಂ ಮಾತ್ರವೇ ತಮ್ಮ ಜತೆ ಕೊಂಡೊಯ್ಯಲು ಅವಕಾಶ ನೀಡಲಾಗಿತ್ತು. ಮತ ಎಣಿಕೆಯ ಹಿನ್ನೆಲೆಯಲ್ಲಿ ೧೪೪ ಸೆಕ್ಷನ್ ಜಾರಿಗೊಳಿಸಲಾಗಿದ್ದು ಬಿಗಿ ಪೊಲೀಸ್ ಪಹರೆ ಏರ್ಪಡಿಸಲಾಗಿತ್ತು. ಬಾರ್, ವೈನ್‌ಶಾಪ್ ಸಹಿತ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.
ವಿವಿಪ್ಯಾಟ್ ಸ್ಲಿಪ್ ತಾಳೆ ಬಳಿಕವೇ ಅಧಿಕೃತ ಫಲಿತಾಂಶ ಪ್ರಕಟ: ಮಧ್ಯಾಹ್ನದ ವೇಳೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರೆತು ವಿವಿದೆಡೆ ಸಂಭ್ರಮಾಚರಣೆ ನಡೆಸಲಾಯಿತಾದರೂ ಅಧಿಕೃತ ಫಲಿತಾಂಶ ಘೋಷಣೆ ವಿಳಂಬವಾಗಿತ್ತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಈ ಬಾರಿ ಪ್ರತೀ ವಿಧಾನಸಭಾ ಕ್ಷೇತ್ರದ ಐದು ಮತ ಕೇಂದ್ರಗಳ ವಿವಿಪ್ಯಾಟ್ ಪೇಪರ್ ಸ್ಲಿಪ್‌ಗಳ ಜತೆ ಇವಿಎಮ್ ಮತಗಳ ಪರಿಶೀಲನೆ ಮಾಡಿದ ಬಳಿಕವೇ ಅಧಿಕೃತ ಫಲಿತಾಂಶ ಪ್ರಕಟವಾಗಬೇಕಿತ್ತು. ಮತ ಎಣಿಕೆ ಮುಗಿದ ಬಳಿಕ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ತಲಾ ೫ರಂತೆ ಪ್ರತೀ ಲೋಕಸಭಾ ಕ್ಷೇತ್ರದ ೪೦ ಮತಗಟ್ಟೆಗಳ ಇವಿಎಂಗಳಲ್ಲಿ ಬಿದ್ದ ಮತಗಳನ್ನು ವಿವಿಪ್ಯಾಟ್‌ನ ಮುದ್ರಿತ ಚೀಟಿಗಳೊಂದಿಗೆ ತಾಳೆ ಮಾಡಲಾಗಿತ್ತು. ಈ ಪ್ರಕ್ರಿಯೆ ಮುಗಿದ ಬಳಿಕವೇ ಚುನಾವಣಾ ಆಯೋಗ ಫಲಿತಾಂಶ ಘೋಷಣೆ ಮಾಡಿತ್ತು. ಪ್ರತೀ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಟ ೪೦ ಮತಗಟ್ಟೆಗಳ ಇವಿಎಂ ಮತ ಮತ್ತು ವಿವಿಪ್ಯಾಟ್‌ನಲ್ಲಿ ಮುದ್ರಿತ ಚೀಟಿಗಳೊಂದಿಗೆ ತಾಳೆ ಹಾಕಲಾಗಿದ್ದು ಒಂದು ಇವಿಎಂ ವಿವಿಪ್ಯಾಟ್ ತಾಳೆ ನಡೆಸಲು ಕನಿಷ್ಠ ೪೫ ನಿಮಿಷ ಸಮಯ ಬೇಕಾಗಿದ್ದರಿಂದ ಅಧಿಕೃತ ಫಲಿತಾಂಶ ಘೋಷಣೆ ವಿಳಂಬವಾಗಿತ್ತು. ಸಂಜೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗಿತ್ತು.
ಗೆಲುವಿನ ಅಂತರ ಇಳಿಕೆ: ಬಿಜೆಪಿ ಈ ಬಾರಿ ಗೆಲುವು ಸಾಧಿಸಿದರೂ ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಗೆಲುವಿನ ಅಂತರ ಈ ಬಾರಿ ಇಳಿಕೆಯಾಗಿದೆ. ೨೦೧೯ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರನ್ನು ನಳಿನ್ ಕುಮಾರ್ ಕಟೀಲ್ ೨,೭೪,೬೨೧ ಮತಗಳ ಅಂತರದಿಂದ ಮಣಿಸಿದ್ದರು. ಈ ಬಾರಿ ಪದ್ಮರಾಜ್ ಅವರನ್ನು ಬ್ರಿಜೇಶ್ ಚೌಟರು ೧,೪೯,೨೦೮ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಕಳೆದ ಸಾಲಿಗೆ ಹೋಲಿಸಿದರೆ ೧,೨೫,೪೧೩ ಮತಗಳ ಅಂತರ ಇಳಿಕೆ ಕಂಡಿದೆ. ೧೯೯೧ರಲ್ಲಿ ೩೫,೦೦೫, ೧೯೯೬ರಲ್ಲಿ ೧೪,೪೯೯, ೧೯೯೮ರಲ್ಲಿ ೬,೯೦೭, ೧೯೯೯ರಲ್ಲಿ ೮,೪೬೯, ೨೦೦೪ರಲ್ಲಿ ೩೩,೪೧೫, ೨೦೦೯ರಲ್ಲಿ ೪೦,೪೨೦ ಹಾಗೂ ೨೦೧೪ರಲ್ಲಿ ೧,೪೩,೭೦೪ ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.
ಬಿಜೆಪಿ ಪ್ರಯೋಗ ಮತ್ತೆ ಯಶಸ್ವಿ: ಹಾಲಿ ಸಂಸದ ಮಾತ್ರವಲ್ಲ, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದವರು ನಳಿನ್ ಕುಮಾರ್ ಕಟೀಲ್. ಅವರ ಬದಲು ಹೊಸ ಮುಖವನ್ನು ದ.ಕ. ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯೋಗಕ್ಕೆ ಬಿಜೆಪಿ ಕೈಹಾಕಿ ಯಶಸ್ವಿಯಾಗಿದೆ. ಹಾಗೆ ನೋಡಿದರೆ ಇಂಥ ಪ್ರಯೋಗವನ್ನು ದ.ಕ. ಕ್ಷೇತ್ರದಲ್ಲಿ ಬಿಜೆಪಿ ಹಲವು ಬಾರಿ ಮಾಡಿದೆ. ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ವಿ.ಧನಂಜಯ ಕುಮಾರ್ ಅವರನ್ನೇ ೨೦೦೪ರಲ್ಲಿ ಬದಲಾಯಿಸಿದ್ದ ಬಿಜೆಪಿ, ಡಿ.ವಿ.ಸದಾನಂದ ಗೌಡರನ್ನು ಅಭ್ಯರ್ಥಿಯನ್ನಾಗಿಸಿತ್ತು. ನಂತರ ೨೦೦೯ರಲ್ಲಿ ಮತ್ತೆ ಬದಲಾವಣೆಯ ಮೊರೆ ಹೋಗಿ, ಆಗ ಗುತ್ತಿಗೆದಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಷ್ಟೇ ಆಗಿದ್ದ ನಳಿನ್ ಕುಮಾರ್ ಕಟೀಲ್ ಅವರನ್ನು ಕಣಕ್ಕಿಳಿಸಿತ್ತು. ನಳಿನ್ ಮೂರು ಬಾರಿ ಸಂಸದರಾಗಿ ಆಯ್ಕೆಯಾದ ನಂತರ ಮತ್ತೆ ಹೊಸ ಅಭ್ಯರ್ಥಿಯನ್ನು ಬಿಜೆಪಿ ನಿಲ್ಲಿಸಿ ಗೆಲ್ಲಿಸಿದೆ.
ಈ ಬಾರಿ ಬೆಳ್ತಂಗಡಿಯಲ್ಲಿ ಕಡಿಮೆಯಾದ ಲೀಡ್: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ೧,೦೬,೬೭೩ ಮತ ಲಭಿಸಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಿಥುನ್ ರೈ ೬೧,೯೧೩ ಮತ ಗಳಿಸಿದ್ದರು. ತಾಲೂಕಿನಲ್ಲಿ ಬಿಜೆಪಿಗೆ ೪೪,೭೬೦ ಮತಗಳ ಲೀಡ್ ಲಭಿಸಿತ್ತು. ಈ ಬಾರಿ ಬಿಜೆಪಿಯ ಬ್ರಿಜೇಶ್ ಚೌಟರಿಗೆ ೧,೦೧,೪೦೮ ಮತ ಹಾಗೂ ಕಾಂಗ್ರೆಸ್‌ನ ಪದ್ಮರಾಜ್‌ರಿಗೆ ೭೮,೧೦೧ ಮತ ಲಭಿಸಿದೆ. ತಾಲೂಕಿನಲ್ಲಿ ಬಿಜೆಪಿಗೆ ಸಿಕ್ಕಿರುವ ಲೀಡ್ ೨೩,೩೦೭ ಮತಗಳು. ಕಳೆದ ಬಾರಿಗೆ ಹೋಲಿಸಿದರೆ ೨೧,೪೫೩ ಮತ ಕಡಿಮೆ.
ದಾಖಲೆಯ ಮತ ಪಡೆದ ನೋಟಾ: ಮತ ಚಲಾವಣೆ ಸಂದರ್ಭ ನೋಟಾ ಆಯ್ಕೆಯನ್ನು ಮತದಾರರಿಗೆ ಕಡ್ಡಾಯವಾಗಿ ನೀಡಬೇಕೆಂದು ಸುಪ್ರೀಂಕೋರ್ಟ್ ೨೦೧೩ರ ಸೆ.೨೭ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಅದರಂತೆ, ೨೦೧೪ರ ಲೋಕಸಭಾ ಚುನಾವಣೆಯಲ್ಲಿ ನೋಟಾ ಆಯ್ಕೆ ನೀಡಲಾಗಿತ್ತು. ಆಗ ದ.ಕ. ಲೋಕಸಭಾ ಕ್ಷೇತ್ರದಲ್ಲಿ ನೋಟಾಕ್ಕೆ ಬಿದ್ದ ಮತಗಳು ೭,೧೦೯. ನಂತರ ೨೦೧೯ರಲ್ಲಿ ಈ ಪ್ರಮಾಣ ತುಸು ಹೆಚ್ಚಾಗಿ ೭೩೮೦ ಮತಗಳು ನೋಟಾಕ್ಕೆ ಚಲಾವಣೆಯಾಗಿತ್ತು. ಈ ಬಾರಿ ಅತ್ಯಧಿಕವೆಂಬಂತೆ ೨೩,೫೭೬ ಮತಗಳು ನೋಟಾಕ್ಕೆ ಚಲಾವಣೆಯಾಗಿವೆ.
ಕಾಂಗ್ರೆಸ್ ಶೇಕಡಾವಾರು ಮತ ೩೭ರಿಂದ ೪೩ಕ್ಕೆ ಜಂಪ್: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು ಚಲಾವಣೆಯಾದ ಮತಗಳು ೧೪,೧೫,೭೭೦. ಇದರಲ್ಲಿ ಶೇ.೫೩.೯೭ ಮತಗಳನ್ನು ಬಿಜೆಪಿ ಪಡೆದುಕೊಂಡಿದೆ. ಇದು ಹಿಂದಿನ ಚುನಾವಣೆಗಿಂತ ಶೇ.೩.೫೮ ಕಡಿಮೆ. ಅದೇ ಹೊತ್ತಿಗೆ ಕಾಂಗ್ರೆಸ್ ಮತ ಬ್ಯಾಂಕ್ ವೃದ್ಧಿಯಾಗಿದೆ. ೨೦೧೯ರಲ್ಲಿ ಶೇ.೩೭.೧೪ರಲ್ಲಿದ್ದ ಮತ ಗಳಿಕೆ ಪ್ರಮಾಣ ಈ ಬಾರಿ ಶೇ.೬.೨೯ ಹೆಚ್ಚಳದೊಂದಿಗೆ ಶೇ.೪೩.೪೩ ಮುಟ್ಟಿದೆ.
ಠೇವಣಿ ಕಳೆದುಕೊಂಡ ೭ ಅಭ್ಯರ್ಥಿಗಳು!: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ೯ ಅಭ್ಯರ್ಥಿಗಳು ಕಣದಲ್ಲಿದ್ದರು. ಅವರ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಹೊರತುಪಡಿಸಿ ಇತರೆಲ್ಲ ೭ ಮಂದಿಯೂ ಠೇವಣಿ ಕಳೆದುಕೊಂಡಿದ್ದಾರೆ. ಲೋಕಸಭೆಗೆ ಸ್ಪರ್ಧಿಸುವವರು ೨೫ ಸಾವಿರ ರೂ. (ಪರಿಶಿಷ್ಟ ಸಮುದಾಯದವರು ೧೨,೫೦೦ ರೂ.) ಠೇವಣಿ ಇಡಬೇಕಾಗುತ್ತದೆ. ಅಭ್ಯರ್ಥಿಯು ತಾನು ಸ್ಪರ್ಧಿಸಿದ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತದಲ್ಲಿ ಆರನೇ ಒಂದು ಭಾಗ(ಶೇ.೧೬.೧೬) ಮತ ಗಳಿಸಿದರೆ ಮಾತ್ರ ಠೇವಣಿ ವಾಪಸ್ ಅಭ್ಯರ್ಥಿಗೆ ಸಿಗುತ್ತದೆ. ಅದಕ್ಕಿಂತ ಕಡಿಮೆ ಮತ ಗಳಿಸಿದರೆ ಠೇವಣಿಯು ಚುನಾವಣಾ ಆಯೋಗದ ಪಾಲಾಗುತ್ತದೆ. ಅದರಂತೆ, ದ.ಕ. ಕ್ಷೇತ್ರದಲ್ಲಿ ೨,೨೮,೭೮೮ಕ್ಕಿಂತ ಹೆಚ್ಚು ಮತ ಪಡೆದವರು ಮಾತ್ರ ಠೇವಣಿ ವಾಪಸ್ ಪಡೆಯಲು ಅರ್ಹರು.

ಫಲಿತಾಂಶದ ವಿವರ:

ಅಭ್ಯರ್ಥಿ                                                 ಪಕ್ಷ ಪಡೆದ ಒಟ್ಟು ಮತ

 ಕ್ಯಾಪ್ಟನ್ ಬ್ರಿಜೇಶ್ ಚೌಟ ಬಿ.ಜೆ.ಪಿ 764132
 ಪದ್ಮರಾಜ್ ಆರ್. ಪೂಜಾರಿ ಕಾಂಗ್ರೆಸ್ 614924
 ಕಾಂತಪ್ಪ ಅಲಂಗಾರ ಬಹುಜನ ಸಮಾಜ ಪಕ್ಷ 4232
 ದುರ್ಗಾಪ್ರಸಾದ್ ಕರುನಾಡ ಸೇವಕರ ಪಕ್ಷ 2592
 ಸುಪ್ರೀತ್ ಕುಮಾರ್ ಪೂಜಾರಿ ಕಟೀಲು ಪಕ್ಷೇತರ 1901
 ಮ್ಯಾಕ್ಸಿಮ್ ಪಿಂಟೊ ಪಕ್ಷೇತರ 1690
 ಪ್ರಜಾಕೀಯ ಮನೋಹರ ಉತ್ತಮ ಪ್ರಜಾಕೀಯ ಪಕ್ಷ 971
 ದೀಪಕ್ ರಾಜೇಶ್ ಸೆಲ್ಹೊ ಪಕ್ಷೇತರ 976
 ರಂಜಿನಿ ಎಂ. ಕರ್ನಾಟಕ ರಾಷ್ಟ್ರ ಸಮಿತಿ 776
 ನೋಟ ಯಾವುದೂ ಅಲ್ಲ
23576

-1415770


ಪ್ರಥಮ ಹಂತದಿಂದ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡ ಬ್ರಿಜೇಶ್ ಚೌಟ: ಇವಿಎಂ ಮತಗಳ ಎಣಿಕೆಯ ಮೊದಲು ನಡೆದ ಅಂಚೆ ಮತಗಳ ಎಣಿಕೆಯಲ್ಲಿ ಬಿಜೆಪಿಯ ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದಾರೆ. ಬ್ರಿಜೇಶ್ ಚೌಟ ಅವರು ೪೦೦೨ ಅಂಚೆ ಮತ ಪಡೆದುಕೊಂಡಿದ್ದು ಪದ್ಮರಾಜ್ ಪೂಜಾರಿ ೨೮೨೧ ಮತ ಪಡೆದಿದ್ದಾರೆ. ಇವಿಎಂ ಮತ ಎಣಿಕೆಯ ಪ್ರಥಮ ಸುತ್ತಿನಿಂದ ಕೊನೆಯ ಹಂತದವರೆಗೂ ಬಿಜೆಪಿಯ ಕ್ಯಾ. ಬ್ರಿಜೇಶ್ ಚೌಟ ಮುನ್ನಡೆ ಸಾಧಿಸಿದ್ದರು. ಪ್ರಥಮ ಸುತ್ತಿನಲ್ಲಿ ಕ್ಯಾ. ಬ್ರಿಜೇಶ್ ಚೌಟ ೪೪,೮೦೨ ಮತ ಪಡೆದು ಮುನ್ನಡೆ ಆರಂಭಿಸಿದರೆ ಕಾಂಗ್ರೆಸ್‌ನ ಪದ್ಮರಾಜ್ ಆರ್. ಪೂಜಾರಿ ೩೬,೨೮೮ ಮತ ಪಡೆದು ಹಿನ್ನಡೆ ಅನುಭವಿಸಿದರು. ಎರಡನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೮೬,೧೪೦, ಪದ್ಮರಾಜ್ ಪೂಜಾರಿ ೭೬,೭೩೧, ಮೂರನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ೧,೩೨,೦೪೬, ಪದ್ಮರಾಜ್ ಪೂಜಾರಿ ೧,೧೩,೬೯೬, ನಾಲ್ಕನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೧,೮೧,೪೮೪, ಪದ್ಮರಾಜ್ ಪೂಜಾರಿ ೧,೫೦,೧೧೮, ಐದನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೨,೩೧,೫೮೫, ಪದ್ಮರಾಜ್ ಪೂಜಾರಿ ೧,೮೪,೪೯೯, ಆರನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೨,೭೭,೩೫೨, ಪದ್ಮರಾಜ್ ಪೂಜಾರಿ ೨,೧೮,೨೬೩, ಏಳನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೩,೨೫,೭೦೯, ಪದ್ಮರಾಜ್ ಪೂಜಾರಿ ೨,೪೯,೩೩೫, ಎಂಟನೇ ಸುತ್ತಿನಲ್ಲಿ ಬ್ರಿಜೇಶ್ ಚೌ ೩,೬೯,೩೩೫, ಪದ್ಮರಾಜ್ ಪೂಜಾರಿ ೨,೮೬,೭೫೩, ಒಂಬತ್ತನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೪,೧೪,೮೫೯, ಪದ್ಮರಾಜ್ ಪೂಜಾರಿ ೩,೨೨,೧೯೫, ಹತ್ತನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೪,೬೪,೩೧೪, ಪದ್ಮರಾಜ್ ಪೂಜಾರಿ ೩,೫೩,೭೮೭, ಹನ್ನೊಂದನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೫,೧೦,೫೨೯, ಪದ್ಮರಾಜ್ ಪೂಜಾರಿ ೩,೯೦,೩೨೭, ಹನ್ನೆರಡನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೫,೫೭,೨೩೦, ಪದ್ಮರಾಜ್ ಪೂಜಾರಿ ೪,೨೫,೧೧೪, ಹದಿಮೂರನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೫,೯೭,೭೧೧, ಪದ್ಮರಾಜ್ ಪೂಜಾರಿ ೪,೬೪,೧೪೮, ಹದಿನಾಲ್ಕನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೬,೪೧,೦೯೫, ಪದ್ಮರಾಜ್ ಪೂಜಾರಿ ೫,೦೨,೪೪೯ ಮತ, ೧೫ನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೬೮೩೩೧೧, ಪದ್ಮರಾಜ್ ಪೂಜಾರಿ ೫೪೧೪೬೩, ೧೬ನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೭೧೯೭೧೩, ಪದ್ಮರಾಜ್ ಪೂಜಾರಿ ೫೭೨೧೯೮, ೧೭ನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೭೪೫೧೩೮ ಮತ್ತು ಪದ್ಮರಾಜ್ ಪೂಜಾರಿ ೫೯೬೭೭೦, ೧೮ನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೭೫೯೩೦೫, ಪದ್ಮರಾಜ್ ಪೂಜಾರಿ ೬೧೧೩೯೭ ಮತ್ತು ೧೯ನೇ ಸುತ್ತಿನಲ್ಲಿ ಬ್ರಿಜೇಶ್ ಚೌಟ ೭೬೦೧೩೦ ಮತ್ತು ಪದ್ಮರಾಜ್ ಪೂಜಾರಿ ೬೧೨೧೦೩ ಮತ ಪಡೆದರು.
೭೦೩೨ ಅಂಚೆ ಮತ: ಈ ಬಾರಿಯ ಚುನಾವಣೆಯಲ್ಲಿ ದ.ಕ. ಕ್ಷೇತ್ರದಲ್ಲಿ ಒಟ್ಟು ೭,೦೩೨ ಅಂಚೆ ಮತ ಚಲಾವಣೆಯಾಗಿದೆ. ಇದರಲ್ಲಿ ಬಿಜೆಪಿಯ ಬ್ರಿಜೇಶ್ ಚೌಟ ೪೦೦೨ ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಪದ್ಮರಾಜ್ ಆರ್. ಪೂಜಾರಿ ೨,೮೨೧ ಮತ ಪಡೆದಿದ್ದಾರೆ. ಉಳಿದಂತೆ, ಮ್ಯಾಕ್ಸಿಂ ಪಿಂಟೋ ೩೬, ಕಾಂತಪ್ಪ ಅಲಂಗಾರ್ ೩೦, ದೀಪಕ್ ರಾಜೇಶ್ ಕುವೆಲ್ಲೊ ೨೬, ರಂಜಿನಿ ಎಂ. ೧೮, ಸುಪ್ರೀತ್ ಕುಮಾರ್ ೧೭, ದುರ್ಗಾಪ್ರಸಾದ್ ೧೪, ಪ್ರಜಾಕೀಯ ಮನೋಹರ ೭ ಅಂಚೆ ಮತಗಳನ್ನು ಪಡೆದುಕೊಂಡಿದ್ದಾರೆ. ನೋಟಾಕ್ಕೆ ೬೧ ಅಂಚೆ ಮತಗಳು ಲಭಿಸಿವೆ.

ಎನ್‌ಸಿಸಿಯಲ್ಲಿ ಅತ್ಯುತ್ತಮ ಕೆಡೆಟ್ ಆಗಿದ್ದ ಮಾಜಿ ಯೋಧ ಬ್ರಿಜೇಶ್ ಚೌಟ ಲೋಕಸಭೆ ಪ್ರವೇಶ: ವಿದ್ಯಾರ್ಥಿ ಜೀವನದಲ್ಲಿ ಎನ್‌ಸಿಸಿಯ ಅತ್ಯುತ್ತಮ ಕೆಡೆಟ್ ಆಗಿದ್ದ ಭಾರತೀಯ ಸೇನೆಯ ಮಾಜಿ ಯೋಧ ಬ್ರಿಜೇಶ್ ಚೌಟರವರು ಲೋಕಸಭೆ ಪ್ರವೇಶಿಸುವ ಮೂಲಕ ಸಾಧನೆ ಮಾಡಿದ್ದಾರೆ. ಮಂಗಳೂರಿನ ರಥಬೀದಿ ಬಳಿ ನೆಲೆಸಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕಾಲೇಜು ದಿನಗಳಲ್ಲಿಯೇ ಎನ್‌ಸಿಸಿಯಲ್ಲಿ ತೊಡಗಿಕೊಂಡಿದ್ದು ಮಂಗಳೂರು ವಿವಿಯಲ್ಲಿ ಅತ್ಯುತ್ತಮ ಕೆಡೆಟ್ ಎಂಬ ಹೆಗ್ಗಳಿಕೆ ಪಡೆದಿದ್ದರು. ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಚೌಟ ಬಳಿಕ ಮಧ್ಯಪ್ರದೇಶದ ಇಂದೋರ್ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.
ಯುಪಿಎಸ್ಸಿ ಮೂಲಕ ಡಿಫೆನ್ಸ್ ಪರೀಕ್ಷೆ ಬರೆದು ತೇರ್ಗಡೆಗೊಂಡು ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಭಾರತೀಯ ಭೂಸೇನೆ ಸೇರಿದ್ದರು. ಪ್ರತಿಷ್ಠಿತ ಎಂಟನೇ ಗೋರ್ಖಾ ರೈಫಲ್ಸ್ ೭ನೇ ಬೆಟಾಲಿಯನ್ನಲ್ಲಿ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಹುದ್ದೆಗೇರಿದ್ದರು. ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿದ್ದ ಚೌಟರು ಸೇನಾ ನಿವೃತ್ತಿಯ ಬಳಿಕ ಮಂಗಳೂರಿಗೆ ಆಗಮಿಸಿ ಆರೆಸ್ಸೆಸ್‌ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು ೨೦೧೩ರಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕೀಯಕ್ಕಿಳಿದಿದ್ದರು. ೨೦೧೬-೧೯ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಸದ ನಳಿನ್ ಕುಮಾರ್ ಕಟೀಲ್ ಜತೆಗೂಡಿ ಪಕ್ಷದ ಕೆಲಸ ಮಾಡಿದ್ದರು. ೨೦೧೯ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ ಅವರು ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು. ಇದಲ್ಲದೆ, ೨೦೧೫ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರದ ಅಸೆಂಬ್ಲಿ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಕರ್ತವ್ಯ ನಿರ್ವಹಿಸಿದ್ದರು. ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಜೊತೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದರು. ಕೆಲವು ಸಮಯಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಸಮರ್ಥನ್ ಫೌಂಡೇಶನ್ ಮೂಲಕ ಮುಂಚೂಣಿಯಲ್ಲಿದ್ದ ಬ್ರಿಜೇಶ್: ಪಕ್ಷದ ಚಟುವಟಿಕೆ ಜೊತೆಗೆ ಸಮರ್ಥನ್ ಫೌಂಡೇಶನ್ ಮೂಲಕ ಮಂಗಳೂರಿನಲ್ಲಿ ಸಾಮಾಜಿಕ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಬ್ರಿಜೇಶ್ ಚೌಟ ಅವರು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಫೌಂಡೇಶನ್ ಮೂಲಕ ತಮ್ಮದೇ ಸ್ನೇಹಿತರನ್ನು ಕಟ್ಟಿಕೊಂಡು ಸದ್ದಿಲ್ಲದೆ ಸೇವಾ ಚಟುವಟಿಕೆಯನ್ನು ನಡೆಸಿದ್ದರು. ಇದಲ್ಲದೆ, ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾತ್ರ ಇರುತ್ತಿದ್ದ ಲಿಟ್ ಫೆಸ್ಟ್ ಎನ್ನುವ ರಾಷ್ಟ್ರ ಮಟ್ಟದ ಸಾಹಿತ್ಯ ಕೂಟವನ್ನು ಮಂಗಳೂರಿನಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಸಂಘಟಿಸಿದ್ದರು. ರಾಷ್ಟ್ರೀಯ ಮಟ್ಟದ ವಾಗ್ಮಿಗಳು, ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಜೊತೆಗೂಡಿಸಿ ಸಂವಾದ, ಧನಾತ್ಮಕ ಸಾಹಿತ್ಯ ಚಟುವಟಿಕೆಗೆ ವೇದಿಕೆ ಒದಗಿಸಿದ್ದಲ್ಲದೆ ೨೦೧೯ರಿಂದ ಪ್ರತಿ ವರ್ಷ ಲಿಟ್ ಫೆಸ್ಟ್ ಸಂಘಟಿಸುತ್ತಿದ್ದಾರೆ. ಆ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ, ಯುವ ಸಾಹಿತ್ಯ ಪ್ರಿಯರಿಗೆ ರಾಷ್ಟ್ರ ಮಟ್ಟದ ದಿಗ್ಗಜರ ಜೊತೆಗೆ ಸಂವಾದಕ್ಕೆ ವೇದಿಕೆ ಸೃಷ್ಟಿಸಿದ್ದರು.
ಕಂಬಳ ನಿಷೇಧ ವಿರುದ್ಧ ಹೋರಾಟದಲ್ಲಿದ್ದ ಚೌಟ: ೨೦೧೫ರಲ್ಲಿ ಕರಾವಳಿಯ ಜನಪದ ಕ್ರೀಡೆ ಕಂಬಳ ನಿಷೇಧಕ್ಕೊಳಗಾದ ಸಂದರ್ಭದಲ್ಲಿ ಅದರ ವಿರುದ್ಧ ಹೋರಾಟ ಸಂಘಟಿಸಿದವರಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಒಬ್ಬರು. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಕಂಬಳ ಆಯೋಜಿಸುತ್ತಿದ್ದಾರೆ. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಬ್ರಿಜೇಶ್ ಚೌಟ ಬಂಟ ಸಮುದಾಯದ ಪ್ರಮುಖ ಗುತ್ತಿನ ಮನೆಗೆ ಸೇರಿದವರು. ಅವಿವಾಹಿತರಾಗಿರುವ ಬ್ರಿಜೇಶ್ ಚೌಟ ಅವರು ಇದೀಗ ಪ್ರಥಮ ಬಾರಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.







Exit mobile version