ಕೊಕ್ಕಡ: ವಿದ್ಯಾರ್ಥಿ ದೆಸೆಯಲ್ಲಿ ಗಿಡ ಮರಗಳ ಮಹತ್ವವನ್ನು ಅರಿತು, ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯ ಪ್ರಸ್ತುತ ಕಾಲ ಘಟ್ಟದಲ್ಲಿ ಅತಿ ಅವಶ್ಯಕವಾಗಿದ್ದು, ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಣ ಮಾತ್ರವಲ್ಲದೆ ಪ್ರಕೃತಿಯೊಂದಿಗೆ ಬದುಕುವ ನೈಜ ಜೀವನ ಪದ್ಧತಿಯನ್ನು ತಿಳಿ ಹೇಳುವ ಕಾರ್ಯವು ನಡೆಯುತ್ತಿದೆ. ವಿದ್ಯಾರ್ಥಿಗಳ ಮೂಲಕ ಮನೆಯಲ್ಲಿ ಹಾಗೂ ಶಾಲೆಯಲ್ಲಿ ಗಿಡವನ್ನು ನೆಟ್ಟು ಪೋಷಿಸುವ ಕಾರ್ಯ ಮಾಡಲಾಗುತ್ತಿದೆ. ಶಾಲೆಯಲ್ಲಿ ಈಗಾಗಲೇ ಆಡಳಿತ ಸಮಿತಿ ಹಾಗೂ ಶಿಕ್ಷಕರು ಮಗುವಿಗೊಂದು ಮರ ಎನ್ನುವ ಯೋಜನೆಯನ್ನು ಹಾಕಿಕೊಂಡಿದೆ.
ಈ ಯೋಜನೆಯಲ್ಲಿ ಪ್ರತಿ ಮಗುವು ಶಾಲೆಯಲ್ಲೊಂದು ಅಥವಾ ಮನೆಯಲ್ಲೊಂದು ಗಿಡ ನೆಟ್ಟು ಪೋಷಿಸುವ ಕಾರ್ಯ ಮಾಡಲಿದ್ದಾರೆ ಎಂದು ಶ್ರೀ ಕ್ಷೇತ್ರ ಸೌತಡ್ಕದ ನೈಮಿಷ ಹೌಸ್ ಆಫ್ ಸ್ಪೈಸಸ್ ನ ಮಾಲಕ ಬಾಲಕೃಷ್ಣ ನೈಮಿಷ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಗಿಡ ನೆಟ್ಟು ಅವರು ಮಾತನಾಡಿದರು.
ಸಂಸ್ಥೆಯ ಸಂಚಾಲಕ ಪ್ರಶಾಂತ್ ಶೆಟ್ಟಿ ದೇರಾಜೆ ಮಾತನಾಡಿ, ಗಿಡ ನೆಟ್ಟು ಪೋಷಿಸುವ ಕಾರ್ಯ ಕೇವಲ ಪರಿಸರ ದಿನಾಚರಣೆಗಷ್ಟೇ ಸೀಮಿತವಾಗಿರದೆ, ನಿರಂತರ ನಾವು ಪ್ರಕೃತಿಯೊಂದಿಗೆ ಸಂಬಂಧವನ್ನು ಇರಿಸಿಕೊಳ್ಳುವಂತಿರಬೇಕು ಎಂದರು.
ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ಮಾತನಾಡಿ, ಶಾಲೆಯಲ್ಲಿ ಕಳೆದ ವರ್ಷವೂ ಹಲವು ಔಷಧಿಯ ಗಿಡಗಳನ್ನು ನೆಟ್ಟು ಪೋಷಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಮುಂದುವರಿಸಿಕೊಂಡು ಹೋಗಲಿದ್ದೇವೆ ಎಂದರು.
ವಿದ್ಯಾರ್ಥಿಗಳ ಮನೆಯಿಂದ ತಂದಿರುವ ಗಿಡಗಳನ್ನು ಶಾಲಾ ತೋಟದಲ್ಲಿ ನೆಡಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜೊತೆಗಿದ್ದರು.