Site icon Suddi Belthangady

ಉಜಿರೆ: ಶ್ರೀ.ಧ.ಮಂ.ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ಬೆಳೆಸಿ ಅಭಿಯಾನ ಕಾರ್ಯಕ್ರಮ

ಉಜಿರೆ: ಶ್ರೀ.ಧ.ಮಂ.ಕಾಲೇಜು(ಸ್ವಾಯತ್ತ), ಉಜಿರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಬೆಳ್ತಂಗಡಿ ತಾಲೂಕಿನ ವನ್ಯಜೀವಿ ವಲಯ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ಬೆಳೆಸಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕಿನ ವನ್ಯಜೀವಿ ವಲಯ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಕುಮಾರ್ ಎಸ್. ಇವರು ಮಾತನಾಡಿ ” ದಿನದಿಂದ ದಿನಕ್ಕೆ ಬದಲಾಗುತ್ತಿರುವ ತಾಪಮಾನದಿಂದ ಉಂಟಾಗುತ್ತಿರುವ ಸಮಸ್ಯೆಗಳು ಹಲವಾರು. ಆಕ್ಸಿಜನ್ ಸಿಲಿಂಡರ್ ಧರಿಸಿಕೊಂಡು ಜನರು ಓಡಾಡುವಂತಹ ಸಮಯ ಹತ್ತಿರದಲ್ಲಿಯೇ ಇದೆ. ಗಿಡಗಳನ್ನು ನೆಟ್ಟು ಪೋಷಿಸುವುದು ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಎಂದು ಅರ್ಥೈಸಿಕೊಳ್ಳಬೇಕಾಗಿದೆ. ಅರಣ್ಯ ಇಲಾಖೆ ವತಿಯಿಂದ ಜನರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ನೀಡಲಾಗುತ್ತಿದೆ ಮಾತ್ರವಲ್ಲದೇ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯೂ ಇದೆ.ಇದನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಂಡರೆ ಪರಿಸರ ರಕ್ಷಣೆಗೆ ನಮ್ಮ ಸಣ್ಣ ಪ್ರಯತ್ನವನ್ನು ಮಾಡಿದಂತೆ” ಎಂದು ಹೇಳಿ , ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ.ಕುಮಾರ ಹೆಗ್ಡೆ ಮಾತನಾಡಿ “ಇರುವುದೊಂದೇ ಭೂಮಿ, ಸುರಕ್ಷಿತವಾಗಿ ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮದು. ಗಿಡ ನೆಡುವುದು ಅಥವಾ ಅದರ ಪೋಷಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ನಿರಂತರವಾಗಿರಲಿ” ಎನ್ನುವ ಮೂಲಕ ಪ್ರಸ್ತುತ ಪರಿಸರದ ಕುರಿತಾಗಿ ತಜ್ಞರು ತಿಳಿಸಿದ ವಿಚಾರಗಳನ್ನು ಹಂಚಿಕೊಂಡರು.ಸ್ವಯಂಸೇವಕ ನಾಯಕರಿಗೆ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ಹಸ್ತಾಂತರಿಸಲಾಯಿತು.

ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಯೋಜನಾಧಿಕಾರಿ ಪ್ರೊ. ದೀಪಾ ಆರ್.ಪಿ. , ಅರಣ್ಯ ಇಲಾಖೆಯ ಸಿಬ್ಬಂದಿಗಳು, ಎನ್.ಎಸ್.ಎಸ್.ಘಟಕದ ಸ್ವಯಂಸೇವಕರು, ಬಿ. ಎಡ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಯಂಸೇವಕ ರಾಮಕೃಷ್ಣ ಶರ್ಮ ಎನ್. ಕಾರ್ಯಕ್ರಮ ನಿರೂಪಿಸಿ , ವಿನ್ಯಾಸ್ ಜೆ. ಪಿ. ವಂದಿಸಿದರು.

Exit mobile version