Site icon Suddi Belthangady

ಕ್ಯಾನ್ಸ‌ರ್ ಪೀಡಿತರಿಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಬಾಲಕಿ ಅಕ್ಷರಿ ಶೆಟ್ಟಿ

ಬೆಳ್ತಂಗಡಿ: ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ.

ಸೌಂದರ್ಯ, ಸಂಸ್ಕಾರ, ಸಂಸ್ಕೃತಿ ಪ್ರಜ್ಞೆಯ ಪ್ರತೀಕವಾಗಿ ಬಹಳಷ್ಟು ಆಸ್ಥೆಯಿಂದ, ಪ್ರೀತಿಯಿಂದ ತನ್ನ ಜಡೆಯನ್ನು ಮಾರುದ್ದ ಬೆಳೆಸಿದವರು ಉಜಿರೆಯ ಅಕ್ಷರಿ ಶೆಟ್ಟಿಯವರು.ಮಂಗಳೂರಿನ ಮಂಗಳ ಇನ್ಸಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‌ನಲ್ಲಿ ಪ್ರೊಫೆಸರ್ ಆಗಿರುವ ಅಕ್ಷತಾ ಆಳ್ವ ಹಾಗು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮೂಡಬಿದ್ರಿಯ ಆಡಳಿತಾಧಿಕಾರಿಯಾಗಿರುವ ಹರೀಶ್ ಶೆಟ್ಟಿ ದಂಪತಿಗಳ ಪುತ್ರಿ 5ನೇ ತರಗತಿಯಲ್ಲಿ ಕಲಿಯುತ್ತಿರುವ ಅಕ್ಷರಿ ಶೆಟ್ಟಿ ಜೂನ್ 02 ರಂದು ತಾನು ಅದ್ಯಾವ ಪ್ರೀತಿಯಲ್ಲಿ ನೀಳಕೇಶವನ್ನು ಬೆಳೆಸಿದ್ದರೋ ಅಷ್ಟೇ ಪ್ರೀತಿಯಲ್ಲಿ ಆ ಜಡೆಯನ್ನು ಕತ್ತರಿಸಿ ಕ್ಯಾನ್ಸರ್ ಪೀಡಿತರಿಗೆ ದಾನವಾಗಿ ನೀಡಿದರು.

ಈ ವಿಶೇಷ ದಾನ ಇರುವುದು ಸತ್ ಚಿಂತನೆಯ ಸಮಾಜಮುಖಿ ನಡೆ. ನಾವು ಏನೇ ಕಲಿತರೂ ಅದು ಈ ಸಮಾಜದಿಂದಾನೆ ಕಲಿಯುವುದು, ಹೀಗಿರುವಾಗ ಸಮಾಜಕ್ಕೆ ನಾವು ನಮ್ಮಿಂದ ಸಾಧ್ಯವಿರುವ ಏನಾದರೊಂದನ್ನು ಕೊಡುಗೆಯಾಗಿ ನೀಡಬೇಕು ಎನ್ನುವ ನಿಟ್ಟಿನಲ್ಲಿ ಯೋಚಿಸಿದ ಈ ಹುಡುಗಿಗೆ ಕಾಣಿಸಿದ್ದು ನಿತ್ಯನಿರಂತರ ನೋವು ನರಳಾಟಗಳ ಮಧ್ಯೆ ತಮ್ಮ ಮುಂದಿನ ಜೀವನದ ಬಗ್ಗೆ ಯೋಚಿಸಲೂ ಅಸಮರ್ಥರಾಗಿ ಖಿನ್ನತೆಯ ಲೋಕದಲ್ಲಿ ಹುದುಗಿಹೋದ ಕ್ಯಾನ್ಸ‌ರ್ ಪೀಡಿತರು. ಎಲ್ಲರ ಮೊಗದಲ್ಲಿ ಅಲ್ಲವಾದರೂ ಕೆಲವರ ಮೊಗದಲ್ಲಾದರೂ ಮತ್ತೊಮ್ಮೆ ಕಳೆದುಹೋದ ಅವರ ನಗುವನ್ನು ಕಾಣಬೇಕೆಂಬ ಹಂಬಲದಿಂದ ತನ್ನ ಅತೀ ಪ್ರೀತಿಯ ಕೂದಲನ್ನು ದಾನವಾಗಿ ನೀಡಿ ಸಮಾಜದ ಎಲ್ಲರಿಗೂ ಆದರ್ಶವಾಗಿದ್ದಾರೆ. ಕುಮಾರಿ ಅಕ್ಷರಿಯ ಈ ನಡೆ ಎಲ್ಲರಿಂದಲೂ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

Exit mobile version