Site icon Suddi Belthangady

ಉಜಿರೆ: ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪದವಿ ಪೂರ್ವ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

ಉಜಿರೆ: ಎಸ್.ಡಿ.ಎಂ.ವಸತಿ ಪದವಿಪೂರ್ವ ಕಾಲೇಜು ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ ಜೂ 1ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಈ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ.ಪ್ರಥಮ ವರ್ಷದಿಂದಲೇ ಪದವಿ ಪೂರ್ವ ಹಂತದ ಕಲಿಕೆಯಲ್ಲಿ ದಕ್ಷತೆಯನ್ನು ಕಾಯ್ದುಕೊಂಡರೆ ಮುಂದಿನ ದಿನಗಳಲ್ಲಿ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.

ಅಂಕಗಳನ್ನು ತುಂಬಿ ತುಂಬಿ ಕಳಿಸುವ ಕ್ರಮ ಹೊಂದಿರುವ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದು ತಕ್ಷಣ ಮಾನಸಿಕವಾಗಿ ಕುಗ್ಗುವಂತಹ ಸ್ಥಿತಿಗತಿಗಳು ಹೆಚ್ಚಿಗೆದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ,ನಿರ್ವಹಿಸುವ ಗುಣಗಳನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಮಕ್ಕಳನ್ನು ದಂಡಿಸೋ ಬದಲು ಉದಾಹರಣೆಗಳ ಮೂಲಕ ಹೇಳುವುದರೊಂದಿಗೆ ಮಕ್ಕಳ ಮಾನಸಿಕ ಆರೋಗ್ಯ ಉತ್ತಮಿಕೆ ಸಾಧಿಸುವುದು ಹಾಗಾಗಿ ದಂಡನೆಗೆ ಅವಕಾಶ ಕೊಡದೆ ವಿದ್ಯಾರ್ಥಿ ಮುಂದುವರಿಯಬೇಕು.

ಮೊಬೈಲ್, ಟಿವಿಗಳಿಗೆ ಜೋತು ಬಿದ್ದಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಪುಸ್ತಕದ ಗೆಳೆತನವನ್ನು ಬೆಳೆಸಿ, ಜೊತೆಗೆ ಗ್ರಂಥಾಲಯದ ಸರಿಯಾದ ಬಳಕೆ, ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಕಲಿಕೆಗೆ ಪೂರಕವಾಗುವುದು. ಇನ್ನೂ ಚಿಕ್ಕ ಮಕ್ಕಳೆಂಬ ಭ್ರಮೆಯಿಂದ ಹೊರಬಂದು ಜವಾಬ್ದಾರಿಗಳನ್ನು ಹೊತ್ತುಕೊಂಡು ಹೆತ್ತವರ ಜೊತೆ ಆಧ್ಯಾಪಕರ ಜೊತೆ ಸರಿಯಾದ ರೀತಿಯಲ್ಲಿ ಆಪ್ತವಾಗಿ, ಮುಕ್ತವಾಗಿ ಬೆರೆಯುವ ಮನಸ್ಥಿತಿ ಉಳ್ಳವರಾಗಿ ಸಮಸ್ಯೆಯನ್ನ ಬೆಳೆಯಲು ಬಿಟ್ಟು ನಂತರ ಪಶ್ಚತಾಪ ಪಡುವ ಬದಲು ಪ್ರಾರಂಭದಲ್ಲೇ ಸಮಸ್ಯೆಗಳ ಮೂಲ ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು.

‘ದುಬಾರಿ ವಸ್ತುಗಳು ಮನುಷ್ಯನನ್ನು ಸೆಳೆಯಬಲ್ಲದು ಆದರೆ ಅದು ಶಾಶ್ವತವಲ್ಲ, ಅದರೆ ಜೀವನದ ಮೌಲ್ಯಗಳು ಮಾತ್ರ ಶಾಶ್ವತವಾಗಿ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಬಲ್ಲದು. ಹಾಗಾಗಿ ಶಿಕ್ಷಣದ ಜೊತೆಗೆ ಸಂಸ್ಕಾರವೂ ಇರಲಿ,ಎಂದು ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಇವರು ವಿದ್ಯಾರ್ಥಿಗಳನ್ನು ಹಾಗೂ ಹೆತ್ತವರನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಇವರು ಎರಡು ವರ್ಷಗಳ ಕಾಲ ನಿರ್ವಹಿಸುವ ಶೈಕ್ಷಣಿಕ ಜವಾಬ್ದಾರಿಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡಿದರು.

ಗಣಕ ಶಾಸ್ತ್ರದ ಉಪನ್ಯಾಸಕಿ ಪವಿತ್ರ ಕುಮಾರ್ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೀತಿ ನಿಯಮಗಳ ಪರಿಚಯ ಮಾಡಿಕೊಟ್ಟರು.ಗಣಿತಶಾಸ್ತ್ರ ಉಪನ್ಯಾಸಕಿ ಧನಲಕ್ಷ್ಮಿ ಇವರು ಶೈಕ್ಷಣಿಕ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

ಭೌತಶಾಸ್ತ್ರ ಉಪನ್ಯಾಸಕ ವಿಕ್ರಂ.ಪಿ ಕಾಲೇಜಿನಲ್ಲಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ/ನೀಟ್, ಜೆಇಇ ಕುರಿತು ಮಾಹಿತಿ ನೀಡಿದರು.

ದೈಹಿಕ ಮಾರ್ಗದರ್ಶಕ ಲಕ್ಷ್ಮಣ್ ಜಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಉಪಪ್ರಾಂಶುಪಾಲ ಮನೀಶ್ ಕುಮಾರ್ ಸ್ವಾಗತಿಸಿದರು.

ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಪಾರ್ಶ್ವನಾಥ ಹೆಗಡೆ ನಿರೂಪಿಸಿ, ವಂದಿಸಿದರು.

Exit mobile version