Site icon Suddi Belthangady

ಅಡಿಕೆ ವ್ಯಾಪಾರಿಯ ಮನೆ ದರೋಡೆ- ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬೆಳ್ತಂಗಡಿ: 2020ರ ಜೂನ್ 26 ರಂದು ಉಜಿರೆಯ ಓಡಲ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ನುಗ್ಗಿ ಮನೆಯವರ ಕೈ ಕಾಲು ಕಟ್ಟಿಹಾಕಿ ನಗ- ನಗದು ದರೋಡೆ ಮಾಡಿದ ಪ್ರಕರಣವನ್ನು ಬಂಧಿತರಾಗಿರುವ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು ಇದೀಗ ಮೂವರೂ ಆರೋಪಿಗಳಿಗೆ ಮುಂದಿನ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಕರಣದಲ್ಲಿ ಬಂಧಿತರಾಗಿದ್ದು ಹೆಚ್ಚಿನ ತನಿಖೆಗೆ ಒಳಪಡಿಸಲು ಹಾಗೂ ಕಳವು ಗೈದಿರುವ ಸೊತ್ತುಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಇದೀಗ ಮಹಜರು ಪ್ರಕ್ರೀಯೆ ಗಳು ಮುಕ್ತಾಯವಾಗಿದ್ದು ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿದಿದಾಗ ನ್ಯಾಯಾಲಯ ಅವರಿಗೆ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಆ ಹಿನ್ನೆಲೆಯಲ್ಲಿ
ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಅಡಿಕೆ ವ್ಯಾಪಾರಿ ರಿಯಾಝ್(41 ವ), ಆತನ ಸಹೋದರ ಬೆಂಗಳೂರಿನಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ನವಾಝ್ (38 ವ) ಮತ್ತು ಬೆಂಗಳೂರು‌ ನಿವಾಸಿ
ಕೃಷ್ಣ (37 ವ) ಎಂಬವರನ್ನು ಇದೀಗ ಮಂಗಳೂರಿನ ಸಬ್ ಜೈಲಿಗೆ ಕಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ಪತ್ರೆಗಾಗಿ ಪೊಲೀಸರು ಬಲೆಬೀಸಿದ್ದಾರೆ. ಸೂಕ್ಷ್ಮತೆಯ ದೃಷ್ಡಿಯಿಂದ ಅವರ ಹೆಸರುಗಳನ್ನು ಪೊಲೀಸ್ ಇಲಾಖೆ ಬಹಿರಂಗಪಡಿಸಿಲ್ಲ.‌

ಕಲ್ಮಂಜ ಗ್ರಾಮದ ಮಿಯಾ ನಿವಾಸಿ ಅಚ್ಚುತ ಭಟ್ ಎಂಬವರ ಮನೆಯಲ್ಲಿ 2020 ಜೂನ್ 26 ರಂದು ಮಧ್ಯ ರಾತ್ರಿ 2.30 ರಿಂದ 3.30 ರ ಮಧ್ಯೆ ಮನೆ ದರೋಡೆ ನಡೆದಿತ್ತು.

ರಾತ್ರಿ ನಾಯಿ ಬೊಗಳುವ ಶಬ್ದ ಕೇಳಿ ಅಚ್ಚುತ ಭಟ್ ಅವರು ಎಚ್ಚೆತ್ತುಕೊಂಡು ಬಾಗಿಲು ತೆಗೆದು ಹೊರಗೆ ಬಂದಾಗ ಇಬ್ಬರು ಅವರನ್ನು ಸುತ್ತುವರಿದು ಕುತ್ತಿಗೆ ಅದುಮಿ ಹಿಡಿದಿದ್ದರು. ಈ ವೇಳೆ ಅವರು ಬೊಬ್ಬೆ ಹಾಕಿದಾಗ ಮನೆಯಲ್ಲಿದ್ದ ತನ್ನ ಸಹೋದರನ ಪತ್ನಿ ವಿದ್ಯಾಕುಮಾರಿ ಮನೆಯ ಇನ್ನೊಂದು ಬದಿಯಲ್ಲಿದ್ದ ಬಾಗಿಲು ತೆರೆದಾಗ ಅಲ್ಲಿಂದ ಏಕಾಏಕಿ ಇಬ್ಬರು ಮನೆಯ ಒಳಕ್ಕೆ ನುಗ್ಗಿದ್ದರು. ಮನೆಯಲ್ಲಿದ್ದ ಅವರ ತಾಯಿ ಮತ್ತು ತಮ್ಮನ ಪತ್ನಿ ಯನ್ನು ಎದುರಿನ ಚಾವಡಿಯಲ್ಲಿ ಕೂಡಿ ಹಾಕಿ ಬಟ್ಟೆಯಿಂದ ಕೈಕಾಲು ಕಟ್ಟಿ ತಮ್ಮನ ಪತ್ನಿಯ ಕುತ್ತಿಗೆಯಿಂದ ಒಂದು ಚಿನ್ನದ ಕರಿಮಣಿ ಸರ ಹಾಗೂ ತಾಯಿಯ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ಕಿತ್ತುಕೊಂಡಿದ್ದರು. ಅಲ್ಲದೇ ಮನೆಯಲ್ಲಿ ಹುಡುಕಾಡಿ ಕಬ್ಬಿಣದ ಕಪಾಟನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬೆಳ್ಳಿಯ 4 ತಂಬಿಗೆ, ತಾಯಿಯ ಚಿನ್ನದ ಸರ ಮತ್ತು ಒಂದು ಉಂಗುರವನ್ನು ಹಾಗೂ ನಗದು ರೂ 25 ಸಾವಿರ ವನ್ನು ತೆಗೆದುಕೊಂಡಿದ್ದರು. ತಮ್ಮನ ಪತ್ನಿಯ ಬ್ಯಾಗ್ ನಲ್ಲಿದ್ದ ಮಕ್ಕಳ 3 ಸಣ್ಣ ಚೈನ್, ಒಂದು ದೊಡ್ಡ ಚೈನ್, ನೆಕ್ಲೇಸ್, 5 ಸೆಟ್ ಕಿವಿಯ ಬೆಂಡೋಲೆ, 3 ಉಂಗುರ, 4 ಬಳೆಗಳನ್ನು ಆಗಂತುಕರು ದರೋಡೆಗೈದಿದ್ದರು. ಅಲ್ಲದೇ ಅವರ ಮೊಬೈಲ್ ಮತ್ತು ತಮ್ಮನ‌ ಪತ್ನಿಯ 2 ಮೊಬೈಲ್ ಸೆಟ್ ಗಳನ್ನು ನೆಲಕ್ಕೆ ಹೊಡೆದು ಜಖಂಗೊಳಿಸಿದ್ದರು. ಆರೋಪಿತರುಗಳು, ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಂದು ಮನೆಗೆ ಬೆಂಕಿ ಹಾಕುವುದಾಗಿ ಬೆದರಿಸಿ ಪರಾರಿಯಾಗಿದ್ದರು. 2020ರಲ್ಲಿ ನಡೆದ ಈ‌ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಆಗದ್ದರಿಂದ ತನಿಖೆ ನಡೆಸಿದ್ದ ಪೊಲೀಸರು,’ಇದೊಂದು ಪತ್ತೆಯಾಗದ ಪ್ರಕರಣ’ ಎಂದು ನ್ಯಾಯಾಲಯಕ್ಕೆ ‘ಸಿ’ ರಿಪೋರ್ಟ್ ಸಲ್ಲಿಸಿದ್ದರು.

ಇದೀಗ ಆರೋಪಿಗಳು ಪತ್ತೆಯಾಗಿದ್ದು ಕಳವಾದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯದ ಆದೇಶದ ಬಳಿಕ ಆಭರಣಗಳು ಅಚ್ಚುತ ಭಟ್ ಕುಟುಂಬಕ್ಕೆ ವಾಪಾಸು ದೊರೆಯಲಿದೆ.

ಉಂಡ ಮನೆಗೆ ಕನ್ನ ಹಾಕಿದ್ದ ರಿಯಾಝ್ : ಈ‌ಪ್ರಕರಣದ ಪ್ರಮುಖ ಆರೋಪಿ ರಿಯಾಝ್ ಇದೇ ಅಚ್ಚುತ ಭಟ್ ಅವರ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ್ದ.‌ಅಲ್ಲಿಂದ ಕೆಲಸ ಬಿಟ್ಟವನೇ ಸ್ವಂತ ಅಡಿಕೆ ವ್ಯಾಪಾರ ಆರಂಭಿಸಿದ್ದ. ಮುಂಡಾಜೆ ಮತ್ತು ಉಜಿರೆಯಲ್ಲಿ ಎರಡೆರಡು ಮನೆ ಮಾಡಿಕೊಂಡಿದ್ದ.

Exit mobile version