Site icon Suddi Belthangady

ಶಾಸಕ ಹರೀಶ್ ಪೂಂಜ ವಿರುದ್ಧದ ಎರಡೂ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ- ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ ಪುತ್ತೂರು ಇನ್ಸ್ಪೆಕ್ಟರ್

ಬೆಳ್ತಂಗಡಿ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬೆಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರ ವಿರುದ್ಧವೇ ಗುಡುಗಿದ್ದ ಶಾಸಕ ಹರೀಶ್ ಪೂಂಜ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ಪೂರ್ಣಗೊಳಿಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ.28ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

ಪ್ರಕರಣದ ತನಿಖೆಗಾಗಿ ಎಸ್.ಪಿ. ರಿಷ್ಯಂತ್ ಸಿ.ಬಿ. ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಪುತ್ತೂರು ನಗರ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ. ಅವರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಈ ನ್ಯಾಯಾಲಯ ನೋಡಿಕೊಳ್ಳಲಿದೆ. ಅಕ್ರಮ ಗಣಿಗಾರಿಕೆ ಮತ್ತು ಸ್ಪೋಟಕ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ಬಿಜೆಪಿ ಯುವ ಮೋರ್ಚಾದ ನಾಯಕರುಗಳಾದ ಶಶಿರಾಜ್ ಶೆಟ್ಟಿ ಮತ್ತು ಪ್ರಮೋದ್ ಉಜಿರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಪೈಕಿ ಶಶಿರಾಜ್ ಶೆಟ್ಟಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಪೊಲೀಸ್ ಠಾಣೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಶಾಸಕ ಹರೀಶ್ ಪೂಂಜ ಅವರು ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದೂ ಮಾತ್ರವಲ್ಲದೆ ಪೊಲೀಸರ ವಿರುದ್ಧ ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದರು ಎಂದು ಒಂದು ಪ್ರಕರಣ ದಾಖಲಾಗಿತ್ತು.

ಈ ವಿಚಾರವನ್ನು ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಆಡಳಿತ ಸೌಧದ ಬಳಿ ನಡೆದಿದ್ದ ಪ್ರತಿಭಟನೆಯ ವೇಳೆ ಮತ್ತೆ ಶಾಸಕರು ಪೊಲೀಸರ ವಿರುದ್ಧವೇ ಹರಿಹಾಯ್ದ ಬಗ್ಗೆ ಎರಡನೇ ಎಫ್‌ಐಆರ್ ದಾಖಲಾಗಿತ್ತು. ಈ ಸಂಬಂಧವಾಗಿ ಶಾಸಕರಿಗೆ ನೋಟೀಸು ನೀಡಿ ಠಾಣೆಗೆ ವಿಚಾರಣೆಗೆ ಕರತರಲು ಪೊಲೀಸರು ಮನೆಗೆ ತೆರಳಿದ್ದ ವೇಳೆ ಅಲ್ಲೂ ಸಾವಿರಾರು ಜನ ಜಮಾಯಿಸಿ ಹೈಡ್ರಾಮಾ ನಡೆದಿತ್ತು. ಈ ಎರಡೂ ಪ್ರಕರಣಗಳ ತ್ವರಿತ ತನಿಖೆಗೆ ಎಸ್.ಪಿ ಅವರು ನಿಯೋಜಿಸಿದ ತಂಡ ಇದೀಗ ತನಿಖೆ ಪೂರ್ತಿಗೊಳಿಸಿದ್ದು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Exit mobile version