Site icon Suddi Belthangady

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ ಉತ್ಸವ, ವಿಶೇಷ ಸೇವೆಗಳಿಗೆ ಸಂಭ್ರಮದ ತೆರೆ

ಧರ್ಮಸ್ಥಳ: ವೃಷಭ ಮಾಸದ ಹತ್ತನೇ ದಿನ ಪತ್ತನಾಜೆ (ಹತ್ತನಾವಧಿ) ಮೇ 24ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವರ್ಷದ ಉತ್ಸವ, ವಿಶೇಷ ಸೇವೆಗಳು ಸಮಾಪ್ತಿಗೊಳ್ಳುವ  ಸಂಭ್ರಮದ ಪರ್ವ ಮೇ 24ರಂದು ಪತ್ತನಾಜೆ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ರಂಗ ಪೂಜೆ, ಬಲಿ ಉತ್ಸವ, ವಸಂತ ಮಂಟಪದಲ್ಲಿ ಕಟ್ಟೆಪೂಜೆ,  ಅಷ್ಟಾವಧಾನ ಸೇವೆ ಹಾಗೂ ಧ್ವಜ ಮರ ಇಳಿಸುವ ಕಾರ್ಯಕ್ರಮದೊಂದಿಗೆ ವಿಶೇಷ ಉತ್ಸವ, ಸೇವೆಗಳು ಸಮಾಪನಗೊಂಡವು.ಮುಂದಿನ ದೀಪಾವಳಿ ವೇಳೆಗೆ ಮತ್ತೆ  ಎಂದಿನಂತೆ ಉತ್ಸವ, ವಿಶೇಷ ಸೇವೆಗಳು ಪ್ರಾರಂಭಗೊಳ್ಳುತ್ತವೆ.

ಕ್ಷೇತ್ರದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವಾರ್ಷಿಕ ತಿರುಗಾಟ ಸಮಾಪ್ತಿಗೊಳಿಸಿ ಬೆಳಿಗ್ಗೆ ಮೇಳದ ಶ್ರೀ ಮಹಾಗಣಪತಿ ದೇವರನ್ನು ಹಿಂದಿನ ದಿನದ ಮುಂಡಾಜೆ ಕ್ಯಾಂಪಿನಿಂದ  ಧರ್ಮಸ್ಥಳದ ಮಂಜುಕೃಪಾಕ್ಕೆ ಬರಮಾಡಿಕೊಂಡು ಅಲ್ಲಿ ಮದ್ಯಾಹ್ನ ಗಣಹೋಮ, ಮಹಾಪೂಜೆ ನಡೆಯಿತು.

ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸಂಜೆ ವೈಭವದ ಮೆರವಣಿಗೆಯಲ್ಲಿ ಕ್ಷೇತ್ರದ ಸಕಲ ಗೌರವ, ಬಸವ, ಆನೆಗಳು, ಚೆಂಡೆ ತಾಳ ಮೇಳ, ವಾದ್ಯ ಬ್ಯಾಂಡ್ ವಾದನದೊಂದಿಗೆ ಶ್ರೀ ಮಹಾಗಣಪತಿ ದೇವರನ್ನುಅರ್ಚಕರ ನೃತ್ಯ ಸೇವೆಯೊಂದಿಗೆ ಬರಮಾಡಿಕೊಳ್ಳಲಾಯಿತು.

ಶ್ರೀ ದೇವಳದ ಎದುರು ಮತ್ತು ಬೀಡಿನ ಮುಂಭಾಗದಲ್ಲಿ ನರ್ತನ ಸೇವೆ ನಡೆಸಿ ಶ್ರೀ ದೇವರನ್ನು ಛತ್ರ ಗಣಪತಿ ಗುಡಿಯಲ್ಲಿರಿಸಿ ಪೂಜಿಸಲಾಯಿತು.

ಪತ್ತನಾಜೆ ಪ್ರಯುಕ್ತ ಮೇಳಕ್ಕೆ ರಜೆಯಾಗಿದ್ದು ಮುಂದಿನ ಮೂರು ದಿನಗಳ ಕಾಲ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ಮೇಳ ಹಾಗು ಸೇವಾಕರ್ತರ ಸೇವೆಯಾಟದೊಂದಿಗೆ ವಾರ್ಷಿಕ ತಿರುಗಾಟಕ್ಕೆ ಮಂಗಳ ಹಾಡಲಾಗುತ್ತದೆ.

ಹೇಮಾವತಿ ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ಮಣೆಗಾರ್ ವಸಂತ ಮಂಜಿತ್ತಾಯ, ಪಾರುಪತ್ಯದಾರ ಲಕ್ಷ್ಮೀ ನಾರಾಯಣ ರಾವ್, ಬಿ.ಭುಜಬಲಿ, ಉಜಿರೆ ಅಶೋಕ ಭಟ್, ಕ್ಷೇತ್ರದ ಸಿಬಂದಿ ವರ್ಗ, ಊರ ಪರಊರ ಭಕ್ತಾದಿಗಳು ಸಂಭ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Exit mobile version