ಉಜಿರೆ: “ಒಬ್ಬ ಮನುಷ್ಯ ತನ್ನ ಕಾರ್ಯದಲ್ಲಿ ಜಯ ಗಳಿಸಬೇಕಾದರೆ ಪ್ರಯತ್ನ ಅತಿ ಅಗತ್ಯ. ಜೊತೆಗೆ ಅದಕ್ಕೆ ಉತ್ತಮ ಪ್ರೋತ್ಸಾಹ ಸಿಕ್ಕಿದರೆ ಅವರು ಆ ಕೆಲಸದಲ್ಲಿ ಆದಷ್ಟು ಬೇಗ ಜಯವನ್ನು ಗಳಿಸಬಹುದು. ಹಾಗಾಗಿ ಎಲ್ಲಾ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅತ್ಯಗತ್ಯ” ಎಂದು ಉಜಿರೆ ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ. ಹೇಳಿದರು.
ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಕಾಲೇಜಿನಲ್ಲಿ ಇಂದು (ಮೇ 24) ಆಯೋಜಿಸಲಾಗಿದ್ದ ಸ್ತ್ರೀ ಆರೋಗ್ಯ ಕುರಿತ ಮಾಹಿತಿ ಕಾರ್ಯಾಗಾರ ‘ಪ್ರತಿಬಿಂಬ’ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು, ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗ ಮತ್ತು ಉಜಿರೆ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ, “ಸಂಸ್ಕಾರಯುತ ಗುಣಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಸ್ಕಾರಯುತವಾದ ಬದುಕನ್ನು ಸಾಗಿಸಬಹುದು” ಎಂದರು.
ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಡಾ. ರವಿಶಂಕರ್ ಕೆ. ಆರ್. ಉಪಸ್ಥಿತರಿದ್ದರು.
ಬಳಿಕ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿಯರಾದ ತೇಜಸ್ವಿನಿ, ರಕ್ಷಿತಾ, ಹರಿಣಿ, ಸ್ವಾತಿ ಮತ್ತು ಶ್ರೀನಿಧಿ ಕಾರ್ಯಾಗಾರ ನಡೆಸಿಕೊಟ್ಟರು.