Site icon Suddi Belthangady

ಕಾನೂನು ಬಾಹಿರ ಪ್ರತಿಭಟನೆ- ಪೊಲೀಸರಿಗೆ ಜೀವ ಬೆದರಿಕೆ ಆರೋಪ- ಶಾಸಕ ಹರೀಶ್ ಪೂಂಜ ವಿರುದ್ಧ 2ನೇ ಪ್ರಕರಣ ದಾಖಲು

ಬೆಳ್ತಂಗಡಿ: ಶಶಿರಾಜ್ ಶೆಟ್ಟಿ ಬಂಧನವನ್ನು ವಿರೋಧಿಸಿ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ ಪ್ರತಿಭಟನಾ ಸಭೆ ನಡೆಸಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆಯೊಡ್ಡಿರುವ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.

ಪ್ರಕರಣವೊಂದರ ಆರೋಪಿತ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿ ಎಂಬಾತನ ಬಂಧನವನ್ನು ವಿರೋಧಿಸಿ, ಮೇ 20ರಂದು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಕಾನೂನುಬಾಹಿರವಾಗಿ ಬೆಳ್ತಂಗಡಿ ವಿಕಾಸ ಸೌದದ ಮುಂಭಾಗದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಮತ್ತು ಇತರರು, ಜನರನ್ನು ಗುಂಪು ಸೇರಿಸಿ ಪ್ರತಿಭಟನಾ ಸಭೆ ನಡೆಸಿರುತ್ತಾರೆ.

ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜರವರು, ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ದನೆಂದು ಹಾಗೂ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್‌ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಹಾಗೂ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024, ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

Exit mobile version