ಬೆಳ್ತಂಗಡಿ: ಮಾಜಿ ಶಾಸಕ ದಿ. ಕೆ.ವಸಂತ ಬಂಗೇರ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಬೆಳ್ತಂಗಡಿಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನಿಡಲು ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾಯನಕೆರೆಯ ಎಫ್.ಎಂ. ಗಾರ್ಡನ್ ಸಭಾಂಗಣದಲ್ಲಿ ಮೇ 21ರಂದು ಮಾಜಿ ಶಾಸಕ ವಸಂತ ಬಂಗೇರ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ನುಡಿನಮನ ಸಲ್ಲಿಸಿ ಮಾತನಾಡಿದರು.
ಬಂಗೇರ ಅವರ ಪ್ರತಿಮೆ ಸ್ಥಾಪಿಸಿ, ವೃತ್ತದಲ್ಲಿ ಸ್ಥಾಪಿಸಬೇಕು ಎಂಬ ಬೇಡಿಕೆಗೂ ಸರಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ವಸಂತ ಬಂಗೇರ ಮತ್ತು ನಾನು ಒಟ್ಟೊಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಕೊನೆಯವರೆಗೂ ಅವರು ನನಗೆ ಸ್ನೇಹಿತರಾಗಿದ್ದರು. ಅವರ ಅಗಲಿಗೆ ದುಃಖ ತಂದಿದೆ. ಸದಾ ನೇರ, ನಿಷ್ಠುರ, ಸತ್ಯ ನುಡಿಯುವ ವಿಶೇಷ ಗುಣ ಅವರಲ್ಲಿತ್ತು ಎಂದು ಹೇಳಿದರು.
ಬಂಗೇರರು ಯಾವತ್ತೂ ತನ್ನ ವೈಯಕ್ತಿಕ ಕೆಲಸ ಕಾರ್ಯಗಳಿಗಾಗಿ ಬರಲೇ ಇಲ್ಲ. ಪ್ರತಿಬಾರಿ ಬರುವಾಗಲೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಈಡೇರಿಸಲು ಬೇಡಿಕೆ ಇಡುತ್ತಿದ್ದರು. ಐದು ಬಾರಿ ಶಾಸಕರಾದರೂ ಸಚಿವರಾಗಲೂ ಲಾಬಿ ಮಾಡಲಿಲ್ಲ. ಅವರು ಮಾದರಿ ರಾಜಕೀಯ ನಾಯಕ ಎಂದು ಸಿಎಂ ಬಣ್ಣಿಸಿದರು.
ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿ, ಮಾಜಿ ಸಚಿವ ಜನಾರ್ದನ ಪೂಜಾರಿ, ಸ್ಪೀಕರ್ ಯು.ಟಿ.ಖಾದರ್, ಶಾಸಕರಾದ ಅಶೋಕ್ ರೈ, ಹರೀಶ್ ಪೂಂಜ, ಮಾಜಿ ಸಚಿವರಾದ ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.