Site icon Suddi Belthangady

ಕಾಂಗ್ರೆಸ್‌ನಿಂದ ದ್ವೇಷ ರಾಜಕಾರಣ: ಶಾಸಕ ಹರೀಶ್ ಪೂಂಜ ಆರೋಪ- ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಬೆಳ್ತಂಗಡಿಯಲ್ಲಿ ಬಿಜೆಪಿ ಪ್ರತಿಭಟನೆ- ತಾಲೂಕು ಕಚೇರಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿ ಎಂದು ಬೋರ್ಡ್ ಅಳವಡಿಕೆ- ವಸಂತ ಬಂಗೇರರು ಅಧಿಕಾರಿಗಳನ್ನು ನಿಂದಿಸಿದಾಗ ಆಗದ ಕೇಸು ನಾನು ಮಾತನಾಡಿದಾಗ ಹೇಗೆ ಎಂದು ಪೂಂಜ ಪ್ರಶ್ನೆ

ಬೆಳ್ತಂಗಡಿ: ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ಖಂಡಿಸಿ ಮೇ 20ರಂದು ಬೆಳ್ತಂಗಡಿ ಭಾಜಪಾ ವತಿಯಿಂದ ಬೃಹತ್ ಜಾಥಾ ಬಳಿಕ ಪ್ರತಿಭಟನೆ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆಯಿತು.

ಲಾಯಿಲಯಿಂದ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿದರು. ಪ್ರತಿಭಟನಕಾರರು ತಾಲೂಕು ಆಡಳಿತ ಸೌಧಕ್ಕೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಎಂದು ನಾಮಫಲಕ ಅಳವಡಿಸಿ, ಕಾಂಗ್ರೆಸ್ ಏಜೆಂಟ್ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಎಂದು ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ, ತಾಲೂಕು ಕಚೇರಿ ಕಂದಾಯ ಇಲಾಖೆಯ ಕಚೇರಿ ಅಲ್ಲ. ಇದು ಕಾಂಗ್ರೆಸ್ ಆಫೀಸ್. ಆದ ಕಾರಣ ಇವತ್ತಿನಿಂದ ಈ ಕಚೇರಿಗೆ ಕಾಂಗ್ರೆಸ್ ಆಫೀಸ್ ಎಂದು ನಾಮಫಲಕ ಅಳವಡಿಸಿದ್ದೇವೆ. ಬೆಳ್ತಂಗಡಿಯಲ್ಲಿ ದ್ವೇಷ ರಾಜಕಾರಣ ಮಾಡುವ ಸ್ಥಿತಿ ಕಳೆದ ಐದು ವರ್ಷ ಇರಲಿಲ್ಲ. ಯಾವಾಗದಿಂದ ಮಲ್ಲೇಶ್ವರಂನಿಂದ ಒಂದು ಕಾಗೆ ಹಾರಿಕೊಂಡು ಬಂದ ಮೇಲೆ ದ್ವೇಷ ರಾಜಕಾರಣ ನಡೆಯಿತು. ಕಾಗೆಯನ್ನು ಕಲ್ಬಿರು (ಚಾಟಿ ಬಿಲ್ಲು) ವಿನಲ್ಲಿ ಮಲ್ಲೇಶ್ವರಂಗೆ ಓಡಿಸುವ ಕೆಲಸ ಬೆಳ್ತಂಗಡಿಯ ಜನರು ಮಾಡುತ್ತಾರೆ ಎಂದರು.

ದಿವಂಗತ ಮಾಜಿ ಶಾಸಕ ವಸಂತ ಬಂಗೇರರು “ಆಯೆ ಬ್ಯಾರ್ವಸಿ ಸರ್ಕಲ್ ಇನ್‌ಸ್ಪೆಕ್ಟರ್, ನಾಯ್ದ ಮಗೆ ತಹಶೀಲ್ದಾರ್ ಆಯನಾ ತೆರೆ ಕಡ್‌ಪೋಡು” ಎಂದು ಹೇಳಿದರೆ ಎಫ್‌ಐಆರ್ ಆಗುವುದಿಲ್ಲ. ಆದರೆ ನಾನು “ಸ್ಟೇಶನ್ ನಿಮ್ಮ ಅಪ್ಪನದ್ದೇ” ಎಂದು ಕೇಳಿದರೆ ಎಫ್‌ಐಆರ್ ಆಗುತ್ತದೆ. ಹಾಗಾದರೆ ಅಂದು ವಸಂತ ಬಂಗೇರರು ಹೇಳಿದ ಬ್ಯಾವರ್ಸಿ, ನಾಯ್ದ ಮಗ, ಸೂಳೆ ಮಗ ಹೇಳಿದನ್ನು ಪೊಲೀಸರು ಒಪ್ಪಿಕೊಂಡರೇ… ಎಂದು ಪ್ರಶ್ನಿಸಿದ ಪೂಂಜ, ಒಂದು ವಾರದೊಳಗೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಮರಳುಗಾರಿಕೆ ನಿಲ್ಲಬೇಕು.ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ಜೈಲು ಹೋಗಲು ಸಿದ್ಧ ಎಂದು ಹೇಳಿದರು.

ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾನೂನು ಎಲ್ಲರಿಗೂ ಒಂದೇ. ನ್ಯಾಯ ಕೇಳಿದ ಪೂಂಜರ ಮೇಲೆ ಕೇಸ್ ದಾಖಲು ಆಗುತ್ತದೆ. ಆದರೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದವರಿಗೆ ಕೇಸ್ ಆಗಲ್ಲ. ಸರಕಾರಿ ಅಧಿಕಾರಿಗಳು ನ್ಯಾಯಯುತವಾಗಿ ಇರಬೇಕು ಎಂದರು.

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಈ ಹೋರಾಟಕ್ಕೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲೆ, ರಾಜ್ಯದವರೆಗೆ ನಡೆಯುತ್ತದೆ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ, ಹೋರಾಟದಿಂದ ಬೆಳೆದು ಬಂದ ಪಾರ್ಟಿ ಬಿಜೆಪಿ. ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕಾರ್ಯ ಎಂದರು.ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾರ್ಯಕರ್ತರ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಭಾಜಪಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ನಾವೂರು, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಂಜುಳಾ ರಾವ್ ಹಾಗೂ ತಾಲೂಕಿನ ವಿವಿಧ ಮಂಡಲದ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version