Site icon Suddi Belthangady

ಉಜಿರೆ: ಶ್ರೀ ಧ.ಮಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೌಶಲ ತರಬೇತಿ ಶಿಬಿರದ ಸಮಾರೋಪ- ಜ್ಞಾನ, ಕೌಶಲ ಅತ್ಯಗತ್ಯ: ಡಿ.ಯದುಪತಿ ಗೌಡ

ಉಜಿರೆ: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಕ್ಕೆ ಅಂಕಗಳ ಜತೆಗೆ ಹೆಚ್ಚಿನ ಜ್ಞಾನ ಮತ್ತು ಕೌಶಲ ಅತಿ ಅಗತ್ಯ ಎಂದು ಬೆಳ್ತಂಗಡಿಯ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಯದುಪತಿ ಗೌಡ ಹೇಳಿದರು.

ಅವರು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ಉನ್ನತಿ ಫೌಂಡೇಶನ್ ವತಿಯಿಂದ ನಡೆದ ಕೌಶಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಮೇ 17ರಂದು ಉದ್ಘಾಟಿಸಿ ಅವರು ಮಾತನಾಡಿದರು.

“ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೊಸ ಹೊಸ ವಿಷಯಗಳ ಕುರಿತು ತಿಳಿದುಕೊಂಡು ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಹಿಂದೆ ಶಿಕ್ಷಣ ಸಂಸ್ಥೆಗಳು ಕಡಿಮೆ ಇದ್ದು ಉತ್ತಮ ಶಿಕ್ಷಣ ಪಡೆಯಲು ತುಂಬಾ ದೂರ ಹೋಗಬೇಕಾಗುತ್ತಿತ್ತು. ಆದರೆ ಈಗ ನಮಗೆ ಬೇಕಾದ ಶಿಕ್ಷಣ ಸಂಸ್ಥೆಗಳು ತುಂಬಾ ಹತ್ತಿರದಲ್ಲಿವೆ. ಆದರೆ, ಅಂಕಗಳ ಜತೆಗೆ ಉದ್ಯೋಗ ಪೂರಕ ಕೌಶಲ ಹಾಗೂ ಜ್ಞಾನವನ್ನು ಸಂಪಾದಿಸುವುದೂ ಮುಖ್ಯವಾಗುತ್ತದೆ” ಎಂದು ಅವರು ತಿಳಿಸಿದರು.

ಉನ್ನತಿ ಫೌಂಡೇಶನ್’ನ ಚೇಂಜ್ ಮೇಕರ್ ದಿವ್ಯಾ ಅವರು ಮಾತನಾಡಿ, ಒಂದು ತಿಂಗಳು ಪ್ರತಿ ದಿನ ಮೂರು ಗಂಟೆಗಳ ಕಾಲ ಕಮ್ಯುನಿಕೇಶನ್ ಸ್ಕಿಲ್, ಲರ್ನಿಂಗ್ ಸ್ಕಿಲ್, ಇಂಗ್ಲಿಷ್ ಸ್ಪೀಕಿಂಗ್ ಸ್ಕಿಲ್, ಲೀಡರ್ಶಿಪ್ ಕ್ವಾಲಿಟಿ, ಟೀಮ್ ವರ್ಕ್, ಟೈಂ ಮೇನೇಜ್ಮೆಂಟ್ ಮತ್ತು ಫೇಸಿಂಗ್ ಇಂಟರ್ ವ್ಯೂ ಮುಂತಾದ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ ಎಂದರು.

ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಸುಮಂಗಲಾ ಜೈನ್ ಇವರು ಸಂಸ್ಥೆಯ ವಿದ್ಯಾರ್ಥಿನಿಯರು ಈವರೆಗೆ ಆಯ್ಕೆಯಾದ ವಿವಿಧ ಕಂಪೆನಿಗಳ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಅವರು, ವಿದ್ಯಾರ್ಥಿನಿಯರು ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಿಕೊಂಡು ಏಳಿಗೆ ಹೊಂದಬೇಕು ಎಂದು ಕರೆ ಕೊಟ್ಟರು.

ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ, ಪೂರ್ಣ ಸ್ವಾಗತಿಸಿ, ಆಶಿಕಾ ಧನ್ಯವಾದಗೈದರು.

Exit mobile version