ಉಜಿರೆ: ಸಾಫ್ಟ್ ವೇರ್ ನ ತಾಂತ್ರಿಕತೆಯನ್ನು ಅನ್ವಯಿಸಿ ಸಾಂಖ್ಯಿಕ ವಿಶ್ಲೇಷಣೆಯ ಸಾಧ್ಯತೆಗಳನ್ನು ವಿಸ್ತರಿಸಬಹುದು ಎಂದು ಬೆಂಗಳೂರಿನ ಓಎಸ್‌ಬಿ ಸಮೂಹದ ಸಾಂಖ್ಯಿಕ ನಿರ್ಧಾರ ಮತ್ತು ಉತ್ತೇಜನ ವಿಭಾಗದ ಸಹಾಯಕ ವ್ಯವಸ್ಥಾಪಕ ಶೈಲೇಂದ್ರ ಎನ್.ಆರ್. ಅಭಿಪ್ರಾಯಪಟ್ಟರು.
ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗವು ‘ಸಂಗ್ರಹಿತ ಮಾಹಿತಿ ದತ್ತಾಂಶದ ಸಬಲೀಕೃತ ವಿಶ್ಲೇಷಣೆಗಾಗಿ ಪವರ್ ಬಿ ಐ ಮತ್ತು ಟ್ಯಾಬ್ಲೂ ಸಾಫ್ಟ್ ವೇರ್ ಬಳಕೆ’ ಕುರಿತು ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರಕ್ಕೆ ಮೇ 18ರಂದು ಚಾಲನೆ ನೀಡಿ ಮಾತನಾಡಿದರು.
ಪವರ್ ಬಿ.ಐ ಮತ್ತು ಟ್ಯಾಬ್ಲೂ ಎಂಬ ತಾಂತ್ರಿಕ ಸಾಧನಗಳನ್ನು ಬಳಸಿ ಹೇಗೆ ಡೇಟಾವನ್ನು ಶಕ್ತಿಯುತಗೊಳಿಸಬಹುದು ಎನ್ನುವ ವಿಷಯದ ಕುರಿತಾಗಿ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗದ ಪ್ರಥಮ ಮತ್ತು ದ್ವಿತೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತಿಳಿಸಿದರು.
ಪವರ್ ಬಿ.ಐ. ಎನ್ನುವುದು ಮೈಕ್ರೋಸಾಫ್ಟ್ ಒದಗಿಸುವ ವ್ಯಾಪಾರ ವಿಶ್ಲೇಷಣಾ ಸೇವೆಯಾಗಿದ್ದು ಇದರ ಮೂಲಕ ಡೇಟಾವನ್ನು ವಿಶ್ಲೇಷಿಸಬಹುದು. ದೃಶ್ಯೀಕರಿಸಬಹುದು, ಒಳನೋಟಗಳನ್ನು ಪ್ರಸ್ತುತಪಡಿಸಬಹುದು.
ಸಂಸ್ಥೆಯೊಳಗಿನ ವಿವಿಧ ವಿಭಾಗಗಳಲ್ಲಿ ಹಂಚಿಕೊಳ್ಳಬಹುದು. ಟ್ಯಾಬ್ಲೂ ಪ್ರಬಲವಾದ ವ್ಯಾವಹಾರಿಕ ಬುದ್ಧಿಮತ್ತೆ ಸಾಧನವಾಗಿದ್ದು ಅದು ಡೇಟಾ ಹರಿವನ್ನು ನಿರ್ವಹಿಸುತ್ತದೆ ಮತ್ತು ಡೇಟಾವನ್ನು ಕ್ರಿಯಾಶೀಲ ಮಾಹಿತಿಯನ್ನಾಗಿ ಮಾಡುತ್ತದೆ.
ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಸವಿತಾ ಕುಮಾರಿ ಹಾಗು ಸಹಾಯಕ ಪ್ರಾಧ್ಯಾಪಕರುಗಳಾದ ಪ್ರದೀಪ್, ಶ್ವೇತಾ, ಸುಪ್ರಿಯಾ ಉಪಸ್ಥಿತರಿದ್ದರು.