Site icon Suddi Belthangady

ಅಕ್ರಮ ಕಲ್ಲುಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವ ಮುಖಂಡನ ಬಂಧನ- ಬೆಳ್ತಂಗಡಿ ಠಾಣೆಯೆದುರು ಶಾಸಕರಿಂದ ಪ್ರತಿಭಟನೆ- ಪೊಲೀಸರ ವಿರುದ್ಧ ಆಕ್ರೋಶ

ಬೆಳ್ತಂಗಡಿ: ಇಲ್ಲಿನ ಮೆಲಂತಬೆಟ್ಟುವಿನ ಕಲ್ಲಿನ ಕೋರೆಗೆ ಬೆಳ್ತಂಗಡಿ ತಹಶೀಲ್ದಾರ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ನೆಪದಲ್ಲಿ ಗುರುವಾಯನಕೆರೆಯ ತನ್ನ ಮನೆಯಲ್ಲಿದ್ದ ಬಿಜೆಪಿಯ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯವರನ್ನು ಬಂಧನ ಮಾಡಲಾಗಿದ್ದು, ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದರಿಂದ ಆಕ್ರೋಶಗೊಂಡ ಶಾಸಕರು ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸಿ ಅಮಾಯಕನನ್ನು ಬಂಧಿಸಿದ್ದಾರೆಂದು ಆರೋಪಿಸಿದ್ದಾರೆ.ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೇ,ಮನೆಯಲ್ಲಿ ಹೆಂಗಸರು,ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ.

ಅಮಾಯಕನ ಬಂಧನವಾಗಿದ್ದು ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಠಾಣೆಯೆದುರು ಪ್ರತಿಭಟನೆ ನಡೆಸಿದ್ದಾರೆ.ಇದೇ ವೇಳೆ ಮಾತನಾಡಿದ ಬಿಜೆಪಿ ಮಂಡಲಾಧ್ಯಕ್ಷ ಶ್ರೀನಿವಾಸ ರಾವ್” ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

ಅಮಾಯಕ ಬಿಜೆಪಿ ಕಾರ್ಯಕರ್ತನ ಬಂಧನವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಿಲುವು.ಇದನ್ನು ವಿರೋಧಿಸಿ ಬಿಜೆಪಿ ಮಂಡಲದಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು” ಎಂದರು.

ಕೋರೆಗೆ ಸಂಬಂಧಿಸಿದ ಮಾಲಕ ಪ್ರಮೋದ್ ದಿಡುಪೆ ನಾಪತ್ತೆಯಾಗಿದ್ದು ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.

Exit mobile version