Site icon Suddi Belthangady

ಮಲವಂತಿಗೆ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ- ಸಾಹಿತ್ಯ ಬದುಕನ್ನು ಶ್ರೀಮಂತಗೊಳಿಸುವ ಕಲೆ: ಡಾ.ಕುಮಾರ ಹೆಗ್ಡೆ

ಮಲವಂತಿಗೆ: ಬೆಳ್ತಂಗಡಿ ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತುತ್ತ ತುದಿ ಭಾಗವಾದ ಮಲವಂತಿಗೆ ಗ್ರಾಮದ ಎಳನೀರಿನಲ್ಲಿ ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಹಾಗೂ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ “ಸಾಹಿತ್ಯ ಮತ್ತು ಬದುಕು” ವಿಷಯದ ಕುರಿತು ಕಾರ್ಯಕ್ರಮ ಮೇ 18ರಂದು ಜರಗಿತು.

ಎಳನೀರಿನಲ್ಲಿ ಪ್ರಪ್ರಥಮ ಬಾರಿಗೆ ಸಮುದಾಯ ಭವನದಲ್ಲಿ ನಡೆದ ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟ  ಕಾರ್ಯಕ್ರಮವನ್ನು ಉಜಿರೆ ಎಸ್ ಡಿ ಎಂ ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ.ಕುಮಾರ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಸಾಹಿತ್ಯ, ಸಂಗೀತ, ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಸಾಹಿತ್ಯವು ನಮ್ಮ ಬದುಕನ್ನು ಶ್ರೀಮಂತಗೊಳಿಸುತ್ತದೆ.ಪತ್ರಿಕೆ ಹಾಗೂ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು.

ಇದರಿಂದ ಸಾತ್ವಿಕ ಪರಿಸರ ನಿರ್ಮಾಣವಾಗಲು ಸಾಧ್ಯ.ಎಳನೀರಿನಂತಹ ತೀರಾ ಹಿಂದುಳಿದ  ಹಾಗೂ   ಸುಂದರ ಪರಿಸರದಲ್ಲಿ ಇನ್ನಷ್ಟು ಹೆಚ್ಚಿನ ಸಾಹಿತ್ಯಿಕ  ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಮುನಿರಾಜ ರೆಂಜಾಳ ಸಾಹಿತ್ಯಕ್ಕಾಗಿ ಬದುಕು ಸಮರ್ಪಿಸಿಕೊಂಡವರ ನೆನಪು ಶಾಶ್ವತವಾಗಿರುತ್ತದೆ. ಸಂವಿಧಾನ, ವೇದ, ಉಪ ನಿಷತ್, ಕುರಾನ್, ಬೈಬಲ್ ನಂತಹ ಪುಸ್ತಕಗಳು ಜಗತ್ತನ್ನು ಆಳುತ್ತವೆ ಹಾಗೂ ಸಮಾಜದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತವೆ.ಸಾಹಿತ್ಯಕ್ಕೆ ಬದುಕನ್ನು ಹಗುರಗೊಳಿಸುವ ಶಕ್ತಿ ಇದೆ.ಜಾನಪದ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಸಾಹಿತ್ಯ ಕಾಲಕಾಲಕ್ಕೆ ಬದುಕಿನ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ‌.ಪಿ. ಶ್ರೀನಾಥ್ ಮಾತನಾಡಿ ಸಾಹಿತ್ಯ ನಿಂತ ನೀರಾಗದೆ ಎಲ್ಲಾ ಕಡೆ ಪಸರಿಸಿ ಎಲ್ಲರನ್ನು ತಲುಪಬೇಕು.ಇದಕ್ಕಾಗಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದ್ದು ಜಿಲ್ಲೆಯ ಹಿಂದುಳಿದ ಪ್ರದೇಶಗಳಲ್ಲೂ ಇರುವ ಎಲೆ ಮರೆಯ ಕಾಯಿಗಳನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ ಮಾತನಾಡಿದರು.ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಉಪನ್ಯಾಸಕ ದಿವ ಕೊಕ್ಕಡ ಉಪಸ್ಥಿತರಿದ್ದರು.

ಸಾಹಿತ್ಯ ಸೇವೆಗೈದ ಸಾಹಿತಿ ವೈ.ಪ್ರೇಮಕುಮಾರ್ ಎಳನೀರು ಹಾಗೂ ಸಮಾಜಸೇವಕ ಕೇಶವ  ಫಡಕೆ ದಿಡುಪೆ ಅವರನ್ನು ಸನ್ಮಾನಿಸಲಾಯಿತು.ಮಲವಂತಿಗೆ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಜೈನ್ ಸ್ವಾಗತಿಸಿದರು.ತಾಲೂಕು ಘಟಕದ ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು.ಅರ್ಚಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Exit mobile version