ಬೆಳ್ತಂಗಡಿ: ಕೊಕ್ಕಡ ಜೋಡು ಮಾರ್ಗದಲ್ಲಿ ಮೇ 13ರಂದು ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೈ ಯಿಂದ ಹಲ್ಲೆ ನಡೆಸಿದ ಪರಿಣಾಮ ಪಟ್ರಮೆಯ ಕೃಷ್ಣಪ್ಪ(56ವ) ಎಂಬ ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಕೊಲೆ ಆರೋಪದಡಿ ಕೊಕ್ಕಡ ಪಶುಚಿಕಿತ್ಸಾಲಯದ ಹಿರಿಯ ಪಶು ವೈದ್ಯ ಪರೀಕ್ಷಕ ಕುಮಾರ್(52ವ.) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿ ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆಯ ವಿವರ: ಕೂಲಿ ಕಾರ್ಮಿಕ ರಾಗಿದ್ದ ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಕೃಷ್ಣಪ್ಪರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೇ 12ರಂದು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮೇ 13ರಂದು ರಾತ್ರಿ ವಾಪಸ್ ಕೊಕ್ಕಡಕ್ಕೆ ಬಂದಿದ್ದರು. ಕೃಷ್ಣಪ್ಪ ಅವರು ಕೊಕ್ಕಡ ಜೋಡು ಮಾರ್ಗ ಜಂಕ್ಷನ್ ಬಳಿ ನಿಂತಿದ್ದಾಗ ಕೊಕ್ಕಡ ಪಶು ಚಿಕಿತ್ಸಾಲಯದ ಹಿರಿಯ ಪಶುವೈದ್ಯ ಪರೀಕ್ಷಕ ಕುಮಾರ್‌ರವರು ಯಾವುದೋ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಕೃಷ್ಣಪ್ಪರವರಿಗೆ ಕೈಯಿಂದ ಹಲ್ಲೆ ಮಾಡಿದ್ದಾರೆ. ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದ ಕೃಷ್ಣಪ್ಪ ಅವರು ಹಲ್ಲೆಯ ಪರಿಣಾಮ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಮೃತ ಕೃಷ್ಣಪ್ಪ ಅವರ ಪತ್ನಿ ಭಾರತಿ ಅವರು ಧರ್ಮಸ್ಥಳ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2024 ಕಲಂ 302 ಐಪಿಸಿಯಡಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡ ಪೊಲೀಸರು ಹಿರಿಯ ಪಶುವೈದ್ಯ ಪರೀಕ್ಷಕ ಕುಮಾರ್ ಅವರನ್ನು ಬಂಧಿಸಿ ಮೇ 14ರಂದು ಬೆಳ್ತಂಗಡಿ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ್ ಅವರ ಎದುರು ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 15 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಈ ವೇಳೆ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಪುತ್ತೂರಿನ ದಿವ್ಯರಾಜ್ ಹೆಗ್ಡೆ ಹಾಗೂ ಆರೋಪಿ ಪರ ವಕೀಲ ಶಿವಯ್ಯ ಹಾಜರಾಗಿದ್ದರು. ಹಾಸನ ಮೂಲದ ಕುಮಾರ್ ಅವರು ಕೊಕ್ಕಡ ಪಶು ಚಿಕಿತ್ಸಾಲಯದಲ್ಲಿ ಹಲವು ವರ್ಷಗಳಿಂದ ಹಿರಿಯ ಪಶುವೈದ್ಯ ಪರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಅರಸಿನಮಕ್ಕಿ ಪಶು ಚಿಕಿತ್ಸಾಲಯದಲ್ಲೂ ಪ್ರಭಾರ ಕರ್ತವ್ಯದಲ್ಲಿದ್ದರು. ಇವರು ಕುಟುಂಬ ಸಮೇತ ಕೊಕ್ಕಡದಲ್ಲಿ ವಾಸ್ತವ್ಯವಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.