Site icon Suddi Belthangady

ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ- ಪಡಂಗಡಿಯ ನೌಷಾದ್ ಪತ್ತೆಗೆ ಶೋಧ ಮುಂದುವರಿಸಿದ ಎನ್‌ಐಎ

ಬೆಳ್ತಂಗಡಿ: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಮಾಸ್ತಿಕಟ್ಟೆಯಲ್ಲಿ 2022ರ ಜುಲೈ 26ರಂದು ರಾತ್ರಿ 8 ಗಂಟೆ ವೇಳೆಗೆ ನಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು(34ವ) ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯ ಹಮೀದ್‌ರವರ ಪುತ್ರ ನೌಷದ್ (32ವ) ಎಂಬಾತನ ಪತ್ತೆಗೆ ರಾಷ್ಟ್ರೀಯ ತನಿಖಾದಳ ಶೋಧ ಮುಂದುವರಿಸಿದೆ. ನೌಷಾದ್ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ ಬಹುಮಾನ ಘೋಷಿಸಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಆತನನ್ನು ಬಂಧಿಸಲು ವಿವಿದೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಸ್ತಾಫ ಪೈಚಾರ್ ಬಂಧನ-ನೌಷಾದ್ ಪಡಂಗಡಿಗೆ ಶೋಧ: ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ನಾಲ್ಕನೇ ಆರೋಪಿಯಾಗಿದ್ದು ತಲೆಮರೆಸಿಕೊಂಡು ಲುಕ್‌ಔಟ್ ನೋಟೀಸಿಗೆ ಒಳಗಾಗಿದ್ದ ಸುಳ್ಯ ತಾಲೂಕಿನ ಶಾಂತಿನಗರದ ಮುಸ್ತಫಾ ಪೈಚಾರ್ ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಹಾಸನ ಜಿಲ್ಲೆ ಸಕಲೇಶಪುರದ ಆನೆಮಹಲ್ ಬಳಿ ಕೆಲವು ದಿನಗಳ ಹಿಂದೆ ಬಂಧಿಸಿದ್ದಾರೆ. ಮುಸ್ತಾಫ ಪೈಚಾರ್ (43ವ) ಮೇಲೆ ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ ಹಾಗೂ ಸಹಾಯ ಮಾಡಿದ ಆರೋಪವಿದೆ.

18 ಮಂದಿ ಬಂಧನ-7 ಮಂದಿಗೆ ಬಲೆ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನೇರ ಆರೋಪಿಗಳಾದ ಶಿಯಾಬ್ ನಾವೂರು, ಬಶೀರ್ ಎಲಿಮಲೆ, ರಿಯಾಜ್ ಅಂಕತಡ್ಕ, ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಮಹಮ್ಮದ್ ಮುಸ್ತಫ ಪೈಚಾರು, ತುಫೈಲ್ ಮಡಿಕೇರಿ ಮತ್ತು ಕೊಲೆಗೆ ನೆರವು ನೀಡಿದ ಆರೋಪಿಗಳಾದ ಶಫೀಕ್ ಬೆಳ್ಳಾರೆ, ಝಕೀರ್ ಸವಣೂರು, ಹಾರಿಸ್ ಪಳ್ಳಿಮಜಲು, ನೌಫಲ್ ಗೌರಿಹೊಳೆ, ಆಬಿದ್ ನಾವೂರು, ಜಟ್ಟಿಪಳ್ಳದ ಅಬ್ದುಲ್ ಕಬೀರ್, ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ, ಇಬ್ರಾಹಿಂ ಷಾ, ಸದ್ದಾಂ ಪಳ್ಳಿಮಜಲು, ಶಾಹಿದ್ ಬೆಳ್ಳಾರೆ, ಜಾಬಿರ್ ಅರಿಯಡ್ಕ ಹಾಗೂ ಮನ್ಸೂರ್ ಪಾಷಾರವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿದ್ದಿಕ್ ಬೆಳ್ಳಾರೆ, ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಶ್ರಫ್ ಕೊಡಾಜೆ, ಅಬ್ದುಲ್ ನಾಸಿರ್ ಸೋಮವಾರಪೇಟೆ, ಅಬ್ದುಲ್ ರಹಿಮಾನ್ ಸೋಮವಾರಪೇಟೆ ಹಾಗೂ ನೌಶಾದ್ ಪಡಂಗಡಿ ಬೆಳ್ತಂಗಡಿ ಎಂಬವರನ್ನು ಬಂಧನಕ್ಕಾಗಿ ಹುಡುಕಲಾಗುತ್ತಿದೆ.

ನೌಷಾದ್ ಮನೆಗೆ ದಾಳಿ ನಡೆಸಿದ್ದ ಎನ್‌ಐಎ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ನಂಬರ್ 23 ಆಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆಯ ಹಮೀದ್ ಎಂಬವರ ಪುತ್ರ ನೌಷದ್ (32ವ) ಪತ್ತೆಗೆ ನೊಟೀಸ್ ಜಾರಿಗೊಳಿಸಲಾಗಿದ್ದು ಆತನ ಕುರಿತು ಸುಳಿವು ನೀಡಿದವರಿಗೆ ಎನ್‌ಐಎ ತಲಾ 2 ಲಕ್ಷ ರೂ ಬಹುಮಾನ ಘೋಷಿಸಿತ್ತು. ಪಡಂಗಡಿಯ ಪೊಯ್ಯೆಗುಡ್ಡೆ ನಿವಾಸಿ ನೌಷಾದ್ ಮನೆಗೆ ಈ ಹಿಂದೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸಿ ನೊಟೀಸ್ ಜಾರಿಗೊಳಿಸಿದ್ದರು. ಕೊಲೆ ಪ್ರಕರಣ ನಡೆದ ಬಳಿಕ ನೌಷಾದ್ ನಾಪತ್ತೆಯಾಗಿರುವುದು ಅಧಿಕಾರಿಗಳ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನ ಪತ್ತೆಗಾಗಿ ಎನ್‌ಐಎ ಬಲೆ ಬೀಸಿದೆ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಕರ್ನಾಟಕ ಪೊಲೀಸರು ನಡೆಸುತ್ತಿದ್ದರು. ಬಳಿಕ ವ್ಯಾಪಕ ಆಗ್ರಹ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಿನ ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲಾಗಿತ್ತು. ನಂತರ ಕಾನೂನು ಬಾಹಿರ ಕೃತ್ಯ ಎಸಗುತ್ತಿರುವ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು.

ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ: ಎನ್‌ಐಎ ಅಧಿಕಾರಿಗಳು ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಕುರಿತು ತನಿಖೆಗೆ ಇಳಿದ ಬಳಿಕ ಕೊಲೆಯಲ್ಲಿ ನೇರ ಭಾಗಿಯಾದವರನ್ನು, ಸಂಚು ರೂಪಿಸಿದವರನ್ನು ಮತ್ತು ಸಹಕಾರ ನೀಡಿರುವುದನ್ನು ಬಂಧಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಟ್ಟು ೧೮ ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಪಡಂಗಡಿಯ ನೌಷಾದ್ ಸಹಿತ ಏಳು ಮಂದಿಯ ಪತ್ತೆಗೆ ಬಲೆ ಬೀಸಲಾಗಿದೆ. ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಸಲಾಗಿದೆ. ಬಂಧಿತರ ಪೈಕಿ ಕೆಲವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ತಿರಸ್ಕರಿಸಿದೆ.

Exit mobile version