Site icon Suddi Belthangady

ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ 14 ನಾಮಪತ್ರ- ಬಿಜೆಪಿಯಲ್ಲಿ ರಘುಪತಿ ಭಟ್, ಹರೀಶ್ಚಂದ್ರ ಆಚಾರ್ಯ ಬಂಡಾಯ

ಬೆಳ್ತಂಗಡಿ: ಜೂನ್ 3ರಂದು ನಡೆಯಲಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಮೇ 13ರಂದು ಈರ್ವರು ಮತ್ತು ಮೇ 14ರಂದು ನಾಲ್ವರು ಮತ್ತು ಮೇ.15ರಂದು 8 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದ್ದು ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಮೇ 20 ಕೊನೆಯ ದಿನವಾಗಿದೆ. ಜೂನ್ 3ರಂದು ಮತದಾನ ಪ್ರಕ್ರಿಯೆ ಪ್ರತೀ ತಾಲೂಕು ಕೇಂದ್ರಗಳಲ್ಲಿ ನಡೆಯಲಿದ್ದು ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿ ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಜೂನ್ 6ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವಿಕೆ ಮತ್ತು ಮತ ಎಣಿಕೆ ನಡೆಯಲಿದೆ. ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಅವರು ಚುನಾವಣಾಧಿಕಾರಿಯಾಗಿದ್ದಾರೆ.

ನೈರುತ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 767 ಶಿಕ್ಷಕರು ಮತದಾರರಿದ್ದಾರೆ. ಇದರಲ್ಲಿ 335 ಪುರುಷರು ಮತ್ತು 432 ಮಹಿಳೆಯರಿದ್ದಾರೆ. ಹೊಸದಾಗಿ 117 ಶಿಕ್ಷಕರು ಮತದಾನಕ್ಕೆ ಅವಕಾಶ ಕಲ್ಪಿಸಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಎಷ್ಟು ತಿರಸ್ಕೃತಗೊಳ್ಳಲಿದೆ, ಪುರಸ್ಕೃತಗೊಳ್ಳಲಿದೆ ಎಂದು ಕಾದು ನೋಡಬೇಕಿದೆ. ಪುರುಷ ಪದವೀಧರರು 566 ಮತ್ತು 684 ಮಹಿಳಾ ಪದವೀಧರರು ಸೇರಿ ಒಟ್ಟು 1250 ಮತದಾರರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. 297 ಮಂದಿ ಹೊಸದಾಗಿ ಅರ್ಜಿ ಸಲ್ಲಿಸಿದ್ದು ಎಷ್ಟು ಮಂದಿಗೆ ಹಕ್ಕು ಚಲಾವಣೆಯ ಅವಕಾಶ ದೊರೆಯಲಿದೆ ಎಂದು ಇನ್ನಷ್ಟೇ ಗೊತ್ತಾಗಬೇಕಿದೆ.

ನಾಮಪತ್ರ ಸಲ್ಲಿಸಿದವರು: ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಮುಖಂಡರಾದ ಶಿವಮೊಗ್ಗ ವಿನೋಭನಗರ ಬನಶಂಕರಿ ನಿಲಯದ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ಜೆಡಿಎಸ್ ಮುಖಂಡ, ಹಾಲಿ ಪರಿಷತ್ ಸದಸ್ಯರಾಗಿರುವ ಚಿಕ್ಕಮಗಳೂರು ಹೊಸಮನೆ ಬಡಾವಣೆಯ ಎಸ್.ಎಲ್. ಬೋಜೇಗೌಡ ಅವರು ಮೇ 13ರಂದು ನಾಮಪತ್ರ ಸಲ್ಲಿಸಿದ್ದಾರೆ. ಮೇ 14ರಂದು ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕೊಡಗು ಜಿಲ್ಲೆಯ ಕುಶಾಲನಗರದ ಕೂಡ್ಲಾರು ನಿವಾಸಿ ಕೆ.ಕೆ. ಮಂಜುನಾಥ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಉಡುಪಿ ಜಿಲ್ಲೆಯ ಕುಂದಾಪುರ ಕುಂಭಾಶಿಯ ಭಾಸ್ಕರ ಶೆಟ್ಟಿ ಟಿ. ಮತ್ತು ಉಡುಪಿ ಶಿವಳ್ಳಿಯ ಡಾ. ನರೇಶ್ಚಂದ್ರ ಹೆಗ್ಡೆ ನಾಮಪತ್ರ ಸಲ್ಲಿಸಿದ್ದಾರೆ. ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಂಗಳೂರು ಉಲ್ಲಾಳ ತಾಲೂಕಿನ ಪೆರ್ಮನ್ನೂರಿನ ಪಡ್ಡಲ ನಿವಾಸಿ ದಿನಕರ ಉಳ್ಳಾಲ್ ನಾಮಪತ್ರ ಸಲ್ಲಿಸಿದ್ದಾರೆ. ಮೇ 15ರಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬೆಂಗಳೂರು ಕನಕಪುರದ ಎಂ. ಸತೀಶ್ ಕಾರಂತ್, ಮಂಗಳೂರು ನಾಗುರಿಯ ಡಾ.ಎಸ್.ಆರ್. ಹರೀಶ್ ಆಚಾರ್ಯ, ಶಿವಮೊಗ್ಗ ತೀರ್ಥಹಳ್ಳಿಯ ಅರುಣ್ ಎಚ್.ಟಿ, ಶಿವಮೊಗ್ಗ ಶಂಕರಘಟ್ಟದ ಎಂ. ರಮೇಶ್, ನೈರುತ್ಯ ಪದವೀಧರ ಕ್ಷೇತ್ರದಿಂದ ಶಿವಮೊಗ್ಗ ವಿನೋಬಾನಗರದ ಎಸ್.ಪಿ. ದಿನೇಶ್, ಬಂಟ್ವಾಳ ಕಳ್ಳಿಗೆಯ ಬಿ. ಮಹಮ್ಮದ್, ಮಂಗಳೂರು ಎಮ್ಮೆಕೆರೆಯ ಶೇಖ್ ಬಾವಾ ಮತ್ತು ಶಿವಮೊಗ್ಗದ ಉರುಗದೂರು ಶಹರಾಜ್ ಮುಜಾಯಿದ್ ಸಿದ್ದೀಕ್ ನಾಮಪತ್ರ ಸಲ್ಲಿಸಿದ್ದಾರೆ. ಇವರೆಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಈ ಮೂಲಕ 14 ಅಭ್ಯರ್ಥಿಗಳು ಇದುವರೆಗೆ ನಾಮಪತ್ರ ಸಲ್ಲಿಸಿದಂತಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್, ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಮೇ 16ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ರಘುಪತಿ ಭಟ್ ಬಂಡಾಯ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯೊಳಗೆ ಬಂಡಾಯದ ಕಹಳೆ ಕಾಣಿಸಿಕೊಂಡಿದೆ. ಪದವೀಧರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ಚುನಾವಣೆಗೆ ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿಯ ಪ್ರಭಾವಿ ನಾಯಕರಾದ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಟಿಕೆಟ್ ವಂಚಿತರಾಗಿರುವುದರಿಂದ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಂಡಾಯದ ಧ್ವನಿ ಮೊಳಗಿಸಿರುವ ರಘುಪತಿ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಅವಕಾಶ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಘುಪತಿ ಭಟ್ ಅವರನ್ನು ಮನವೊಲಿಸಲು ಪಕ್ಷದ ನಾಯಕರು ಅವಿರತ ಶ್ರಮ ವಹಿಸಿದ್ದಾರೆ. ಮನವೊಲಿಕೆ ಸಾಧ್ಯವಾಗದೇ ಇದ್ದಲ್ಲಿ ರಘುಪತಿ ಭಟ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಾ. ಧನಂಜಯ ಸರ್ಜಿ, ಕಾಂಗ್ರೆಸ್‌ನ ಆಯನೂರು ಮಂಜುನಾಥ್ ಮತ್ತು ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ನಡುವೆ ಹಣಾಹಣಿ ನಡೆಯುವುದು ನಿಶ್ಚಿತವಾಗಿದೆ.

ಶಿಕ್ಷಕರ ಕ್ಚೇತ್ರದಲ್ಲಿ ಬಿಜೆಪಿಯ ಹರೀಶ್ ಆಚಾರ್ಯ ಬಂಡಾಯ: ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು ಟಿಕೆಟ್ ನಿರಾಕರಿಸಲ್ಪಟ್ಟಿರುವ ಹರೀಶ್ ಆಚಾರ್ಯ ಅವರು ಕೂಡ ಬಂಡಾಯ ಮೊಳಗಿಸಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮಾಜಿ ಮುಖಂಡ, ಸಹಕಾರ ಭಾರತಿಯ ಸದಸ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿರುವ ಮಂಗಳೂರಿನ ಹರೀಶ್ ಆಚಾರ್ಯ ಅವರು ಶಿಕ್ಷಕರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹರೀಶ್ ಆಚಾರ್ಯ ಅವರನ್ನೂ ಮನವೊಲಿಸಲು ಪ್ರಯತ್ನ ನಡೆದಿದೆಯಾದರೂ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಹರೀಶ್ ಅವರು ಸ್ಪರ್ಧೆ ಮಾಡಿದ್ದೇ ಆದಲ್ಲಿ ಶಿಕ್ಷಕರ ಕ್ಷೇತ್ರದ ಕಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಎಸ್.ಎಲ್.ಬೋಜೇಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಕೆ. ಮಂಜುನಾಥ ಕುಮಾರ್ ಮತ್ತು ಸ್ವತಂತ್ರ ಅಭ್ಯರ್ಥಿ ಹರೀಶ್ ಆಚಾರ್ಯ ನಡುವೆ ಪೈಪೋಟಿ ಏರ್ಪಡಲಿದೆ.

Exit mobile version