Site icon Suddi Belthangady

ಪತ್ರಿಕಾಗೋಷ್ಠಿ: ಮೇ 26: ಕಳೆಂಜ ನಂದಗೋಕುಲ ಗೋ ಶಾಲೆಯಲ್ಲಿ ನಂದಗೋಕುಲ ದೀಪೋತ್ಸವ- ಪುಣ್ಯಕೋಟಿಗೆ ಒಂದು ಕೋಟಿ, ಗೋ ಮಾತೆಗೆ ಕೋಟಿ ನಮನ- ಮೇ 19ರಂದು ಗೋಗ್ರಾಸ ಹೊರೆಕಾಣಿಕೆ ಅರ್ಪಣೆ

ಬೆಳ್ತಂಗಡಿ: ಕಳೆಂಜ ನಂದಗೋಕುಲ ಗೋಶಾಲೆಯಲ್ಲಿ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ಮೇ 26ರಂದು ನಂದಗೋಕುಲ ದೀಪೋತ್ಸವ, ಪುಣ್ಯ ಕೋಟಿಗೆ ಒಂದು ಕೋಟಿ, ಗೋಮಾತೆಗೆ ಕೋಟಿ ನಮನ ಕಾರ್ಯಕ್ರಮ ಮತ್ತು ದೀಪೋತ್ಸವದ ಪ್ರಯುಕ್ತ ಮೇ 19ರಂದು ಗೋಗ್ರಾಸ ಹೊರೆಕಾಣಿಕೆ ಅರ್ಪಣೆ ನಡೆಯಲಿದೆ ಎಂದು ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಆಗರ್ತ ಹೇಳಿದರು.

ಅವರು ಮೇ 16ರಂದು ಬೆಳ್ತಂಗಡಿ ಟ್ರಸ್ಟ್ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಗೋಮಾತೆಯ ರಕ್ಷಣೆಗಾಗಿ ಮತ್ತು ಅದರ ಅಗತ್ಯತೆ ಸಂದೇಶ ನೀಡಲು ಕಳೆಂಜದಲ್ಲಿ ಪ್ರಾರಂಭವಾದ ಟ್ರಸ್ಟ್ ಮತ್ತು ಗೋಶಾಲೆ ದಾನಿಗಳ ಸಹಕಾರದಿಂದ ಮುನ್ನಡೆಯುತ್ತಿದೆ. ಇಲ್ಲಿಯ ಗೋಮಾತೆಯ ರಕ್ಷಣೆ ಮತ್ತು ಇದರ ಆಹಾರಕ್ಕೆ ದಾನಿಗಳ ಸಹಕಾರದಿಂದ ನಡೆಯುತ್ತಿದೆ.

ಮೇ 26ರಂದು ಸಾಮೂಹಿಕ ಗೋವುಗಳಿಗೆ ಪೂಜೆ, ಗೋನಂದಾರತಿ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಪುಣ್ಯಕೋಟಿಗೆ ಒಂದು ಕೋಟಿ ರೂಪಾಯಿಯ ನೆರವು ನೀಡುವ ಯೋಜನೆಯನ್ನು ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಇವರ ಗೌರವದ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಪ್ರತಿಮನೆಯಿಂದ ಗೋಗ್ರಾಸ ಸಂಗ್ರಹ ಮಾಡಿ ಹಾಗು ದಾನಿಗಳ ಸಹಕಾರದಿಂದ ಒಂದು ಪುಣ್ಯದ ಕಾರ್ಯ ನಡೆಯಲಿದೆ.

ಕಸಾಯಿ ಖಾನೆಗಳಿಗೆ ಹೋಗುವ ಹೋರಿ, ದನ, ಕರುಗಳು ರಕ್ಷಣೆ ಮಾಡುತ್ತ ಬಂದಿರುವ ನಂದಗೋಕುಲ ಗೋಶಾಲೆಯು ಸುಮಾರು 280 ಗೋವುಗಳನ್ನು ಸಾಕುತ್ತಿದ್ದು ತಿಂಗಳಿಗೆ 3,50,000 ಲಕ್ಷದಷ್ಟು ಖರ್ಚು ವೆಚ್ಚ ಬರುತ್ತಿದೆ.ದಾನಿಗಳ ನೆರವಿನಿಂದ ಇಲ್ಲಿವರೆಗೆ ಉತ್ತಮ ರೀತಿಯಲ್ಲಿ ಗೋಶಾಲೆ ನಡೆಯುತ್ತಿದೆ.

ಆದರೂ ಒಂದಷ್ಟು ಹೆಚ್ಚಿನ ಹೊರೆ ಇರುವ ಕಾರಣ ತಾಲೂಕಿನ ಗೋಪ್ರೇಮಿಗಳು ಸಹಾಯ ಹಸ್ತ ನೀಡಬೇಕಾಗಿದೆ ಎಂದರು. ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಮಾತನಾಡಿ, ಸಂಚಾಲನ ಸಮಿತಿಯ ಗೌರವಾಧ್ಯಕ್ಷ ಶಶಿಧರ ಶೆಟ್ಟಿಯವರ ಮಾರ್ಗದರ್ಶನ ಮತ್ತು ಸಲಹೆಯಂತೆ ತಾಲೂಕಿನ ಎಲ್ಲಾ ಗ್ರಾಮಗಳ 241 ಬೂತ್ ಗಳಿಗೆ ಕಾರ್ಯಕ್ರಮದ ಆಮಂತ್ರಣ ತಲುಪಿಸಿ, ಹೊರೆಕಾಣಿಕೆ, ಬೃಹತ್ ಶೋಭಯಾತ್ರೆಯು ಬೆಳ್ತಂಗಡಿ ಎ ಪಿ ಎಂ ಸಿ ವಠಾರದಿಂದ ಪ್ರಾರಂಭವಾಗುತ್ತದೆ.

ಹಸಿ ಹುಲ್ಲು, ಒಣಹುಲ್ಲು, ಪಶು ಆಹಾರ, ಕೃಷಿ ಉತ್ಪನ್ನಗಳಾದ ಅಡಿಕೆ, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳನ್ನು ಹೊರೆಕಾಣಿಕೆಯಲ್ಲಿ ಸಮರ್ಪಣೆ ಮಾಡಿ ಸಹಕಾರ ನೀಡಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ ಉಪಸ್ಥಿತರಿದ್ದರು.

Exit mobile version