ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಚತುರ್ದಾನ ಪರಂಪರೆಯಲ್ಲಿ ಒಂದಾದ ಔಷಧದಾನವನ್ನು ನಿರಂತರವಾಗಿ ಮಾಡುವಲ್ಲಿ ಸಹಕರಿಸುತ್ತಿರುವ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ದಾದಿಯರು, ರೋಗಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ರೋಗಿಗಳ ಸೇವೆ ಮಾಡುವ ಎಲ್ಲಾ ದಾದಿಯರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿ ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಗ್ಗಡೆ ದಂಪತಿಗಳು ಹಾಗೂ ಹರ್ಷೇಂದ್ರ ಕುಮಾರ್ ದಂಪತಿಗಳ ಶುಭಾಶೀರ್ವಾದ ದಾದಿಯರ ಪಾಲಿಗೆ ಸದಾ ಇದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ದಾದಿಯರ ದಿನಾಚರಣೆಯ ಪ್ರಯುಕ್ತ ದಾದಿಯರನ್ನು ಗೌರವಿಸಿ ಮಾತನಾಡುತ್ತಾ ವೈದ್ಯಕೀಯ ಕ್ಷೇತ್ರದ ವೃತ್ತಿಯಲ್ಲಿ ಅತೀ ಹೆಚ್ಚು ಕಿರಿಕಿರಿಯನ್ನು ಅನುಭವಿಸುವವರು ದಾದಿಯರು. ವೈದ್ಯರ ನಿರ್ದೇಶನ, ಆಡಳಿತ ಮಂಡಳಿಯ ನಿಯಮಗಳನ್ನು ಪಾಲಿಸುತ್ತಾ, ರೋಗಿ ಮತ್ತು ರೋಗಿಯ ಸಹಾಯಕರಿಗೆ ತೃಪ್ತಿಕರ ಸೇವೆ ನೀಡುವುದು ಅತ್ಯಂತ ಕಠಿಣ ಕೆಲಸ ಎಂದರು.
ಮುಖ್ಯವೈದ್ಯಾಧಿಕಾರಿ ಡಾ|ಸಾತ್ವಿಕ್ ಜೈನ್ ದಾದಿಯರಿಗೆ ಶುಭ ಹಾರೈಸಿ ಮಾತನಾಡುತ್ತಾ, ವೈದ್ಯರು ಚಿಕಿತ್ಸೆ ನೀಡುವ ಕೆಲಸ ಮಾಡಿದರೆ, ದಾದಿಯರು ನಿರಂತರ ರೋಗಿಯ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ.ವಿಶ್ವವೇ ಗೌರವಿಸುವ ರೀತಿಯಲ್ಲಿ ತನ್ನ ವೃತ್ತಿ ಜೀವನವನ್ನು ರೋಗಿಗಳ ಸೇವೆಗಾಗಿ ಮುಡಿಪಾಗಿಟ್ಟ ಫ್ಲೋರೆನ್ಸ್ ನೈಟಿಂಗೇಲ್, ನರ್ಸಿಂಗ್ ವೃತ್ತಿ ಮಾಡುವವರಿಗೆ ಮಾದರಿಯಾಗಿದ್ದಾರೆ ಎಂದರು.
ನರ್ಸಿಂಗ್ ಅಧೀಕ್ಷಕಿ ಶೆರ್ಲಿ ದಾದಿಯರ ಪ್ರಮಾಣವಚನವನ್ನು ನೆರವೇರಿಸಿಕೊಟ್ಟು ಮಾತನಾಡುತ್ತಾ, ದಾದಿಯರು ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಪಡೆದು, ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಲು ಬೇಕಾಗುವ ವಿವಿಧ ತರಬೇತಿಯನ್ನು ನಮ್ಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಸರ್ ಆಯೋಜಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.ಇದರಿಂದ ನಮ್ಮ ಆಸ್ಪತ್ರೆ ರಾಷ್ಟ್ರೀಯ ಮಾನ್ಯತಾ ಮಂಡಳಿ ನೀಡುವ ಎನ್.ಎ.ಬಿ.ಹೆಚ್ ಮಾನ್ಯತಾ ಪ್ರಮಾಣ ಪತ್ರ ಪಡೆಯುವಲ್ಲಿ ಹಾಗೂ ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ನಡೆಸುವ ಪರೀಕ್ಷೆಯಲ್ಲಿ ನೂರು ಶೇಕಡಾ ಅಂಕ ಪಡೆಯುವ ಮೂಲಕ ಮಾನ್ಯತಾ ಪ್ರಮಾಣಪತ್ರ ಪಡೆದುಕೊಂಡಿದೆ.ಇವರ ಮಾರ್ಗದರ್ಶನದಲ್ಲಿ ಎಲ್ಲ ದಾದಿಯರಿಗೆ ರೋಗಿಗಳ ನಿರ್ವಹಣೆ ಮತ್ತು ಸೋಂಕು ನಿಯಂತ್ರಣ ಹಾಗೂ ಸಾಮಾರ್ಥ್ಯ ನಿರ್ಮಾಣ ತರಬೇತಿಗಳನ್ನು ನಿರಂತರವಾಗಿ ನೀಡಲಾಗುತ್ತಿದೆ.ಇದರಿಂದಾಗಿ ನಮ್ಮಲ್ಲಿ ಕ್ವಾಲಿಫೈಡ್ ನರ್ಸಸ್‌ಗಳ ಅತ್ಯುತ್ತಮ ಸೇವೆ ರೋಗಿಗಳಿಗೆ ದೊರೆಯುತ್ತಿದೆ.
ಉತ್ತಮ ವೈದ್ಯವೃಂದ ಹಾಗೂ ಆಡಳಿತ ಮಂಡಳಿ, ಎಲ್ಲಕ್ಕಿಂತ ಮಿಗಿಲಾಗಿ ಗೌರವಾನ್ವಿತ ಪೂಜ್ಯ ಹೆಗ್ಗಡೆಯವರು, ಹೇಮಾವತಿ ವಿ ಹೆಗ್ಗಡೆಯವರು ಮತ್ತು ಹೆಗ್ಗಡೆ ಪರಿವಾರದವರ ಮಾರ್ಗದರ್ಶನ ಹೊಂದಿರುವ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ದಾದಿಯರಾಗಿ ಕೆಲಸ ಮಾಡಲು ನಮಗೆ ಹೆಮ್ಮೆ ಅನಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಇವರನ್ನು ಸನ್ಮಾನಿಸಲಾಯಿತು. ಎಲ್ಲಾ ದಾದಿಯರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ದಾದಿಯರಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ನರ್ಸಿಂಗ್ ಸಿಬ್ಬಂದಿಗಳು ದಾದಿಯರ ದಿನಾಚರಣೆ ಪ್ರಯುಕ್ತ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್.ಪಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಗನ್ನಾಥ್ ಎಂ. ನಿರ್ವಹಿಸಿದರು. ಮಾನವ ಸಂಪನ್ಮೂಲ ವಿಭಾಗದ ಸೌಮ್ಯ.ಎನ್ ಹಾಗೂ ಶ್ವೇತಾ ಎಂ ಸಹಕರಿಸಿದರು.