ಬೆಳ್ತಂಗಡಿ: ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾದ ಆಡಳಿತ ಮಂಡಳಿಯ ತಿಂಗಳ ಕಾರ್ಯಕಾರಿ ಸಭೆ ಮೇ 11ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರೀ ಶಾಸಕರಾಗಿದ್ದುಕೊಂಡು, ಜನಪರ ಕೆಲಸಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಹೆಸರು ವಾಸಿಯಾಗಿರುವ ಕೆ.ವಸಂತ ಬಂಗೇರಾ ಅವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು.ಸಂಘದ ಬೆಳವಣಿಗೆಯ ಹಂತ ಹಂತದಲ್ಲೂ ಸಹಕಾರ ನೀಡಿರುವ ಮಾಜಿ ಶಾಸಕರ ಸಹಕಾರಗಳನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಮಾತನಾಡಿ ಸಂಘದ ಬೆಳವಣಿಗೆಗೆ ಅವರ ಶಾಸಕತ್ವದ ಸಮಯದಲ್ಲಿ ನೀಡಿದ ಸಹಕಾರವನ್ನು ಸ್ಮರಿಸುವುದರೊಂದಿಗೆ ತಾಲ್ಲೂಕಿನ ಸಮಸ್ತ ವಿಶ್ವಕರ್ಮ ಸಮಾಜ ಬಂಧುಗಳ ಪರವಾಗಿ ಗೌರವ ನಮನ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್ ಎಸ್, ಗುಂಪಲಾಜೆ, ಜೊತೆ ಕಾರ್ಯದರ್ಶಿ ನಾಗಪ್ರಸಾದ್ ಕುಂಠಿನಿ, ಮತ್ತು ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.