Site icon Suddi Belthangady

ಬೆಳ್ತಂಗಡಿ ತಾ.ಸಪಲಿಗರ ಸಂಘದ 43ನೇ ವಾರ್ಷಿಕ ಮಹಾಸಭೆ- ಸತ್ಯನಾರಾಯಣ ಪೂಜೆ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಗಾಣಿಗರ ಯಾನೆ ಸಪಲಿಗರ ಸಂಘ ಬೆಳ್ತಂಗಡಿ ಇದರ 43ನೇ ವಾರ್ಷಿಕ ಮಹಾಸಭೆ ಮೇ 12ರಂದು ಲಾಯಿಲಾದ ಕಕ್ಕೇನಾ ಗಾಣಿಗರ ಸಭಾಭವನದಲ್ಲಿ ನಡೆಯಿತು.

ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಆರಂಭವಾದ ಕಾರ್ಯಕ್ರಮ ನಂತರ ಸಭಾ ಕಾರ್ಯಕ್ರಮ ನಡೆದು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಎಂ ಸಿ ಎಫ್ ಲಿಮಿಟೆಡ್, ಪಣಂಬೂರು ಇದರ ಸೀನಿಯರ್ ಇಂಜಿನಿಯರ್ ಚಂದ್ರಶೇಖರ್ ಎಡಪದವು ಮಾತನಾಡಿ “ಗಾಣಿಗ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಲ್ಲರೂ ಸೇರಿ ನೆರವಾಗಬೇಕು.

ಮಕ್ಕಳ ಬಗ್ಗೆ ಒಂದು ಸರ್ವೆ ಮಾಡಬೇಕು. ಸಂಘದಿಂದ ಪ್ರೋತ್ಸಾಹ ಪಡೆದ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಸಂಘಕ್ಕೆ ನೆರವಾಗಬೇಕು” ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ತಾ.ಗಾಣಿಗರ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು ಮಾತನಾಡಿ ” ಸಂಘ ಆರ್ಥಿಕ ಕ್ರೋಢಿಕರಣದತ್ತ ಚಿತ್ತನೆಟ್ಟು, ಸಮಾಜದ ಎಲ್ಲಾ ವಿದ್ಯಾರ್ಥಿಗಳಿಗೆ ನೆರವಾಗುವಂತಾಗಬೇಕು.

ಸಮಾಜದ ಸಾಧಕರಿಗೆ ಸನ್ಮಾನಿಸುವುದು ಹಿರಿಯರಿಗೆ ನಾವು ಕೊಡುವ ವಿಶೇಷ ಗೌರವವಾಗಿದೆ. ಬೆಳ್ತಂಗಡಿ ಸಂಘ ಬೆಳೆದು ಬಂದ ಬಗೆಯನ್ನು ವಿಸ್ತಾರವಾಗಿ ವಿವರಿಸಿದರು”.ಇದೇ ವೇಳೆ, ಗಾಣಿಗ ಸಮಾಜದ ಸಾಧಕರಾದ ರಮಾನಾಥ್ ಗಾಣಿಗ, ಜಿನ್ನಪ್ಪ ಸಪಲ್ಯ, ನಾರಾಯಣ ಸಪಲ್ಯರನ್ನು ಸನ್ಮಾನಿಸಲಾಯಿತು.

ಬೆಳ್ತಂಗಡಿ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಲಕ್ಷ್ಮಣ ಸಪಲ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರೆ, ಗೌರವಾಧ್ಯಕ್ಷ ಕೆ.ಪ್ರಭಾಕರ, ಮಹಿಳಾ ವಿಭಾಗದ ಅಧ್ಯಕ್ಷೆ ಸತ್ಯವತಿ, ಯುವ ವಿಭಾಗದ ಅಧ್ಯಕ್ಷ ದಾಮೋದರ್ ದೊಂಡೋಲೆ ಉಪಸ್ಥಿತರಿದ್ದರು.

ಕಾರ್ಯದರ್ಶಿ ಸತೀಶ್ ಓಡದಕರಿಯ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ತುಕರಾಮ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುಜಯ ಪ್ರಿಯದರ್ಶಿನಿ ಧನ್ಯವಾದವಿತ್ತರು.

Exit mobile version