Site icon Suddi Belthangady

ನಾರಾವಿ ಬಸದಿಯಲ್ಲಿ ಧಾಮಸಂಪ್ರೋಕ್ಷಣಾ ಮತ್ತು ಪ್ರತಿಷ್ಠಾ ಮಹೋತ್ಸವ- ಮಠದ ಭಟ್ಟಾರಕರ ಅನುಮತಿ ಇಲ್ಲದೆ ಶ್ರಾವಕರು ಯಾವುದೇ ಪೂಜಾವಿಧಾನ, ಧಾರ್ಮಿಕ ಸಂಪ್ರದಾಯ ಬದಲಾಯಿಸಬಾರದು: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಉಜಿರೆ: ತಮ್ಮ ಪ್ರದೇಶದ ಮಠದ ಭಟ್ಟಾರಕರ ಅನುಮತಿ ಇಲ್ಲದೆ ಶ್ರಾವಕರು ಯಾವುದೇ ಸಂಪ್ರದಾಯ, ಪೂಜಾವಿಧಾನ, ಧಾರ್ಮಿಕ ಸಂಪ್ರದಾಯ ಬದಲಾಯಿಸಬಾರದು ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಮೇ.05ರಂದು ನಾರಾವಿ ಬಸದಿಯಲ್ಲಿ ಜಿನಬಿಂಬ ಪ್ರತಿಷ್ಠಾ ಮಹೋತ್ಸವದ ಸಂದರ್ಭ ಆಯೋಜಿಸಿದ ಧಾರ್ಮಿಕ ಸಭೆಯಲ್ಲಿ ಮಂಗಲ ಪ್ರವಚನ ನೀಡಿದರು.

ನಿರ್ಮಲ ಮನಸ್ಸಿನಿಂದ ದೇವರ ಪೂಜೆ, ಗುರುಗಳ ಸೇವೆ ಮಾಡಿ, ಸ್ವಾಧ್ಯಾಯದ ಮೂಲಕ ತಮ್ಮ ವರ್ತನೆಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು. ಪಂಚೇಂದ್ರಿಯಗಳನ್ನೂ ಸತ್ಕಾರ್ಯಗಳಲ್ಲಿ ಬಳಸಿ ಪುಣ್ಯ ಸಂಚಯ ಮಾಡಿಕೊಳ್ಳಬೇಕು.

ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿಭಟ್ಟಾರಕ ಸ್ವಾಮೀಜಿ ಆಶೀವರ್ಚನ ನೀಡಿದರು.

ಧಾರ್ಮಿಕ  ಉಪನ್ಯಾಸ ನೀಡಿದ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಮಾತನಾಡಿ, ಧಾಮಸಂಪ್ರೋಕ್ಷಣೆ ಸಂದರ್ಭದಲ್ಲಿ ನಮ್ಮನ್ನು ನಾವು ಶುದ್ಧಿಕರಿಸಿಕೊಳ್ಳಬೇಕು. ಆಚಾರ್ಯರುಗಳು ಬರೆದ ಧಾರ್ಮಿಕ ಗ್ರಂಥಗಳ ಸ್ವಾಧ್ಯಾಯ ಮಾಡಿ, ಮಕ್ಕಳಿಗೂ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ ಅಹಿಂಸೆ ಮತ್ತು ತ್ಯಾಗ ಜೈನಧರ್ಮದ ವಿಶೇಷ ತತ್ವಗಳಾಗಿದ್ದು ಎಲ್ಲರೂ ಇದನ್ನು ಅನುಸರಿಸಬೇಕು. ಧರ್ಮದ ಚೌಕಟ್ಟಿನೊಳಗೆ ಪುರುಷಾರ್ಥಗಳನ್ನು ಸಾಧಿಸಬೇಕು ಎಂದು ಸಲಹೆ ನೀಡಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶಿವರಾಂ, ಮಂಗಳೂರಿನ ಪುಷ್ಪರಾಜ ಜೈನ್, ಬಂಟ್ವಾಳದ ಸುದರ್ಶನ ಜೈನ್ ಮತ್ತು ನಿವೃತ್ತ ಪ್ರಾಂಶುಪಾಲ ರಾಜವೀರ ಇಂದ್ರ ಶುಭಾಶಂಸನೆ ಮಾಡಿದರು.ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು.

ರಾಜವೀರ ಜೈನ್ ಸ್ವಾಗತಿಸಿದರು. ಕರುಣಾಕರ ಜೈನ್ ಧನ್ಯವಾದವಿತ್ತರು. ನಿರಂಜನ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಭವ್ಯ ಅಗ್ರೋದಕ ಮೆರವಣಿಗೆ: ಅರಸಕಟ್ಟೆಯಿಂದ ನಾರಾವಿ ಬಸದಿ  ವರೆಗೆ ಮೂರು ಕಿ.ಮೀ. ದೂರ ನಡೆದ ಭವ್ಯ ಮೆರವಣಿಗೆಯಲ್ಲಿ 24 ತೀರ್ಥಂಕರರ ಬಿಂಬಗಳನ್ನು ಬಸದಿಗೆ ತರಲಾಯಿತು.ನಾರಾವಿ, ಹೊಸ್ಮಾರು, ರೆಂಜಾಳ, ಅಳದಂಗಡಿ, ಈದು, ನೂರಾಳಬೆಟ್ಟು ಮೊದಲಾದ 24 ಗ್ರಾಮಗಳ ಶ್ರಾವಕರು-ಶ್ರಾವಕಿಯರು ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದರು.ಬಸದಿಯಲ್ಲಿ ಭಗವಾನ್ ಧರ್ಮನಾಥ ಸ್ವಾಮಿಯ ಪ್ರತಿಷ್ಠೆ, ಶಿಖರಾರೋಹಣ, ಭಗವಾನ್ ಚಂದ್ರನಾಥ ಸ್ವಾಮಿಯ ಪ್ರತಿಷ್ಠೆ, ಶಾಂತಿಚಕ್ರ ಆರಾಧನೆ, 24 ತೀರ್ಥಂಕರರ ಆರಾಧನೆ, ಅಭಿಷೇಕ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.ರಕ್ತೇಶ್ವರಿ ದೈವದ  ನೇಮ ನಡೆಯಿತು.

Exit mobile version