ಉಜಿರೆ: ಚಿಕಿತ್ಸಕ ದೃಷ್ಟಿಕೋನದಿಂದ ವ್ಯಾವಹಾರಿಕ ವಲಯದಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಮಂಗಳೂರಿನ ತ್ರಿಶಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಮಾಜಿ ಪ್ರಾಂಶುಪಾಲ ಗಿರೀಶ್ ಮಾಡ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಎರಡು ದಿನಗಳ ‘ಗ್ರೋತ್‌ಹೊರೈಜಾನ್’ ವಿದ್ಯಾರ್ಥಿ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವ್ಯವಹಾರ ರಂಗದಲ್ಲಿ ಹಲವಾರು ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಿ ಗೆಲ್ಲಲು ಸವಾಲುಗಳನ್ನು ನೋಡುವ ಹಾಗೂ ವಿಶ್ಲೇಷಿಸುವ ದೃಷ್ಟಿಕೋನ ವಿಶಿಷ್ಟವಾಗಿರಬೇಕು ಎಂದು ಹೇಳಿದರು.
ಎಲ್ಲರಿಗಿಂತಲೂ ವಿಭಿನ್ನ ಸೃಜನಶೀಲ ಆಲೋಚನೆ ಹಾಗೂ ದೃಷ್ಟಿಕೋನ ಹೊಂದಿರುವುದು ಮುಂಬರುವ ಸ್ಪರ್ಧಾತ್ಮಕ ಯುಗದಲ್ಲಿ ಮಹತ್ವ ಪೂರ್ಣವಾಗಲಿದೆ.ಯಶಸ್ವಿ ಉದ್ಯಮಿಯಾಗಲು ಅರ್ಹರನ್ನಾಗಿಸುತ್ತದೆ.
ಸೃಜನಶೀಲತೆ ಹಾಗೂ ಸ್ಪರ್ಧಾಕ್ಮಕತೆಯನ್ನು ಉನ್ನತೀಕರಿಸಲು ಸಮಾಜದಲ್ಲಿ ಅವಕಾಶಗಳ ಕೊರತೆ ಇಲ್ಲ. ಸಮರ್ಥವಾಗಿ ಬಳಸಿಕೊಳ್ಳುವ ಮನಸ್ಥಿತಿ ಇರಬೇಕು ಎಂದು ನುಡಿದರು.
ಉಜಿರೆ ಎಸ್.ಡಿ.ಎಂ.ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ವ್ಯವಹಾರ ಅಧ್ಯಯನ ನಿರತ ವಿದ್ಯಾರ್ಥಿಗಳು ಭಾವನಾತ್ಮಕವಾಗಿ ಸಕಾರಾತ್ಮಕ ಚಿಂತನೆಯೊಂದಿಗಿರಬೇಕು.ಈ ರೀತಿಯ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಭಾರತದ ಅಗ್ರ ಉದ್ಯಮಿಗಳಾಗುವ ಅವಕಾಶ ತೆರೆದಿಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ.ಕಾಲೇಜಿನ ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥೆ ಶಕುಂತಲಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ನೇಹಾ ಐ ಕಾರ್ಯಕ್ರಮ ನಿರೂಪಿಸಿದರು.