Site icon Suddi Belthangady

ಉಜಿರೆ: ಶ್ರೀ ಧ.ಮಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಒಂದು ವಾರದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಎ.20ರಂದು ನಡೆಯಿತು.

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಡಿ.ಯಂ ರೆಸಿಡೆನ್ಸಿಯಲ್‌ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸುನಿಲ್‌ ಪಂಡಿತ್‌ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಬೇಸಿಗೆ ರಜೆಯ ಸದ್ವಿನಿಯೋಗದೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಬೇಕಾದ ಧನಾತ್ಮಕ ಬದಲಾವಣೆಯ ಬಗ್ಗೆ ತಿಳಿ ಹೇಳಿದರು.

ಕಂಪ್ಯೂಟರ್ ಅಸೆಂಬ್ಲಿಂಗ್, ಇಲೆಕ್ಟ್ರಾನಿಕ್ಸ್, ಸೌರಶಕ್ತಿ ಉತ್ಪಾದನೆ ಮುಂತಾದ ತಂತ್ರಜ್ಞಾನ ವಿಷಯಗಳೊಂದಿಗೆ ಬೌದ್ಧಿಕ ಮತ್ತು ಕೌಶಲ್ಯಾಭಿವೃದ್ದಿ ವಿಷಯಗಳು, ಐಡಿಯಾ ಜನರೇಶನ್, ಪ್ರಾಜೆಕ್ಟ್ ತಯಾರಿ, ಕಾರ್ಯಕ್ರಮ ನಿರ್ವಹಣೆ, ಕ್ರೀಡೆ, ಯೋಗ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಹಾಗೂ ತರಬೇತಿಯೊಂದಿಗೆ ಶಿಬಿರ ಅರ್ಥಪೂರ್ಣವಾಗಿ ಸಂಪನ್ನಗೊಂಡಿದೆ ಎಂದು ಪ್ರಾಂಶುಪಾಲ ಡಾ.ಅಶೋಕ್‌ ಕುಮಾರ್‌ ಅನಿಸಿಕೆ ವ್ಯಕ್ತಪಡಿಸಿದರು.

ಇಲ್ಲಿನ ತಾಂತ್ರಿಕ ಹಾಗೂ ಕೌಶಲ್ಯಾಭಿವೃದ್ದಿ ತರಬೇತಿಯು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿತ್ತು ಎಂದು ಶಿಬಿರಾರ್ಥಿ ಕು.ಅಲಾಪ್ ತಮ್ಮ ಅನಿಸಿಕೆ ವಕ್ತಪಡಿಸಿದರು.

ಇನ್ನೋರ್ವ ಶಿಬಿರಾರ್ಥಿ ಕು. ಋತ್ವಿಕ್ ಶೆಟ್ಟಿ ಕಂಪ್ಯೂಟರ್ ಅಸೆಂಬ್ಲಿಂಗ್ ಬಹಳ ಆಸಕ್ತಿದಾಯಕವಾಗಿದ್ದು, ನನ್ನಲ್ಲಿ ತಾಂತ್ರಿಕ ವಿಚಾರದ ಕುರಿತು ಆತ್ಮವಿಶ್ವಾಸ ಮೂಡಿಸಿದೆ ಎಂದು ಅನುಭವ ಹಂಚಿದರು.ಶಿಬಿರಾರ್ಥಿಗಳಲ್ಲಿ ಕಂಡುಬಂದ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿದ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ, ಇಲೆಕ್ಟ್ರಾನಿಕ್ಸ್‌ ವಿಭಾಗದ ಸಹ ಪ್ರಾದ್ಯಾಪಕ ಮಹೇಶ್‌‌ ಉಪಸ್ಥಿತರಿದ್ದರು.ಶಿಬಿರಾರ್ಥಿಯಾದ ಕು.ರಕ್ಷಿತ್‌ ಶೆಟ್ಟಿ ಕಾರ್ಯಕ್ರಮ ನಿರೂಪಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.

Exit mobile version