Site icon Suddi Belthangady

ಕಡಿರುದ್ಯಾವರ: ಉದ್ದದ ಪಲ್ಕೆ-ಕೋಡಿ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ- ಗ್ರಾಮಸ್ಥರಿಂದ ಆಕ್ರೋಶ

ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆಗೆ ನಿರ್ಮಾಣವಾಗುತ್ತಿದ್ದ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ಕಾಮಗಾರಿಗೆ ತಡೆಯೊಡ್ಡಿದ ಘಟನೆ ಬುಧವಾರ ಮೇ.01ರಂದು ನಡೆದಿದೆ.

ಕಡಿರುದ್ಯಾವರ ಗ್ರಾಮದ ಉದ್ದದ ಪಲ್ಕೆ-ಕೋಡಿರಸ್ತೆ ನಡುವ ಸುಮಾರು 200 ಮೀ.ಕಾಂಕ್ರೀಟ್ ರಸ್ತೆಗೆ ಜಿ.ಪಂ. ನಿಧಿಯಿಂದ ಸುಮಾರು 10 ಲಕ್ಷ ರೂ. ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ ಸ್ಕಿಡ್ಡರ್ ಅಳವಡಿಸದೆ ನಿರ್ಮಿಸಿದ್ದಾರೆ. ಇದರಿಂದ ರಸ್ತೆ ಒಂದು ವರ್ಷವೂ ಬಾಳಿಕೆ ಬರುವುದಿಲ್ಲ. ಸಮರ್ಪಕವಾಗಿ ಕಾಂಕ್ರೀಟ್ ಒಳಗಡೆ ಸೇರಿಕೊಳ್ಳಲು ಇದರ ಅವಶ್ಯಕತೆಯಿದೆ. ಈ ವಿಧಾನ ಅಳವಡಿಸದಿರುವ ಕುರಿತು ಗ್ರಾಮಸ್ಥರು ಪ್ರಶ್ನಿಸಿದರು.

ಜಿ.ಪಂ.ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ಗುತ್ತಿಗೆದಾರರು ಈ ವಿಧಾನ ನಮ್ಮಲ್ಲಿಲ್ಲ, ನಾವಿನ್ನು ರಸ್ತೆ ನಿರ್ಮಿಸುವುದಲ್ಲ ಎಂದು ಕಾಮಗಾರಿ ಅರ್ಧದಲ್ಲೆ ನಿಲ್ಲಿಸಿ ವಾಹನ ತೆರವುಗೊಳಿಸಲು ನಿರ್ಧಿರಿಸಿದ್ದರು. ಇದಕ್ಕೆ ಗ್ರಾ.ಪಂ. ಅಧ್ಯಕ್ಷೆ ರತ್ನಾವತಿ ಬಾಲಕೃಷ್ಣ ಅವರ ಮೂಲಕ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಅಧ್ಯಕ್ಷರು ವೈಜ್ಞಾನಿಕ ಕ್ರಮದಲ್ಲೆ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.ಇದೇ ಪದ್ಧತಿಯಲ್ಲಿ ದೂಂಬೆಟ್ಟು ಸಮೀಪ ಈ ರೀತಿ ರಸ್ತೆ ನಿರ್ಮಿಸಿದ್ದರಿಂದ ರಸ್ತೆ ಬಾಳಿಕೆ ಬಂದಿರಲಿಲ್ಲ. ಹಾಗಾಗಿ ಸ್ಕಿಡ್ಡರ್ ಬಳಸಿ ರಸ್ತೆ ನಿರ್ಮಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ವೇಳೆ ಗ್ರಾಮಸ್ಥರಾದ ರಾಮಚಂದ್ರ ಗೌಡ, ರಾಘವೇಂದ್ರ ಭಟ್, ಜಗದೀಶ್ ಗೌಡ, ಕಮಲಾ ಕೋಡಿ, ನಿರಂಜನ್ ಉದ್ದದ ಪಲ್ಕೆ, ಜಗದೀಶ್ ನಾಯ್ಕ್, ರಾಜೇಶ್ ಕೋಡಿ, ಸಂಜೀವ ಗೌಡ, ಕೇಶವ ರಾಮಂದೊಟ್ಟು, ಕೃಷ್ಣಪ್ಪ. ಗಿರಿಯಮ್ಮ, ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.

Exit mobile version